ಬೆಂಗಳೂರು, ಮೇ 26: ”ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೇಶಕ್ಕೆ ಮಾದರಿಯಾಗಿರುವುದು ಕೊರೊನಾ ನಿಯಂತ್ರಣದಲ್ಲಿ ಅಲ್ಲ, ಭ್ರಷ್ಟಾಚಾರದಲ್ಲಿ” ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಕೊರೊನಾ ಸಾಂಕ್ರಮಿಕ ರೋಗದ ನಿಯಂತ್ರಣ ಮಾಡುವಲ್ಲಿ, ಚಿಕಿತ್ಸೆ ನೀಡುವಲ್ಲಿ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವಲ್ಲಿ ಕೇಂದ್ರ ಸರಕಾರ ಬೆಂಗಳೂರನ್ನು ಮಾದರಿ ನಗರವಾಗಿ ಪರಿಗಣಿಸಿದೆ ಎಂಬ ಖುಷಿಯನ್ನು ಸರಕಾರ ಸಂಭ್ರಮಿಸುತ್ತಿದೆ . ನಿಚ್ಚಳವಾಗಿ ಈ ಪ್ರಶಂಸೆಗೆ ರೋಗ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂಧಿಗಳು, ಕೊರೊನಾ ವಾರಿಯರ್ಸ್ ಮೊದಲಾದವರು ಅರ್ಹರಾಗಿದ್ದಾರೆ. ಆದರೆ, ಇದನ್ನು ಬಿಬಿಎಂಪಿ ಅಧಿಕಾರಿಗಳು, ಬೇಜವಾಬ್ದಾರಿ ಸಚಿವರು ಸಂಭ್ರಮಿಸುತ್ತಿರುವುದು ಹಾಸ್ಯಾಸ್ಪದ ಎಂದು ತನ್ನ ಮಾದ್ಯಮ ಹೇಳಿಕೆಯಲ್ಲಿ ಆರೋಪಿಸಿದೆ.
ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ರೋಗ ತಗುಲಿದವರ ಸಂಖ್ಯೆ ಏರಿಕೆಯಾಗುತ್ತಿದೆ. ವೈದ್ಯಕೀಯ ಪರೀಕ್ಷೆಯ ಸಂಖ್ಯೆ ಕೂಡ ಗಣನೀಯವಾಗಿಲ್ಲ. ಕೊರೊನಾ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳನ್ನು ಒದಗಿಸಿಲ್ಲ. ಬಿಬಿಎಂಪಿ ಆಯುಕ್ತರಂತೂ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪವನ್ನು ಎದುರಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ಬೆಂಗಳೂರು ದೇಶಕ್ಕೆ ಮಾದರಿ ನಗರವಾಗಿದೆ ಎಂಬ ಕೇಂದ್ರ ಸರಕಾರದ ಘೋಷಣೆ ಸಮಂಜಸವಾಗಿಲ್ಲ ಎಂದು ಹೇಳಿದೆ.
ಕೇಂದ್ರ ಸರಕಾರ ಯಾವ ಮಾನದಂಡಗಳ ಮೂಲಕ ಬೆಂಗಳೂರನ್ನು ದೇಶಕ್ಕೆ ಮಾದರಿ ಎಂದು ಪರಿಗಣಿಸಿದೆಯೋ ಅದು ಗೊಂದಲಮಯವಾಗಿದೆ. ಅದು ನೀಡಿರುವ ಬಿರದು ಹಿಡಿದುಕೊಂಡು ಸಂಭ್ರಮಿಸುವ ಸಮಯ ಇದಲ್ಲ. ರೋಗ ನಿಯಂತ್ರಣದ ಜೊತೆಗೆ ಮುಂದೆ ರಾಜ್ಯ ಎದುರಿಸಲಿರುವ ಕಂಡು ಕೇಳರಿಯದ ಆರ್ಥಿಕ ಹಾಗೂ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸರಕಾರ ಸಜ್ಜಾಗಬೇಕು. ಕೊರೋನ ನಿಯಂತ್ರಣ ಎಂದರೆ ಪ್ರಚಾರ ಗಿಟ್ಟಿಸಿಕೊಳ್ಳುವುದು ಅಲ್ಲ. ಮುಖ್ಯಮಂತ್ರಿಗಳು ತಕ್ಷಣ ಭಷ್ಟ ಬಿಬಿಎಂಪಿ ಅಧಿಕಾರಿಗಳನ್ನು, ಕಮಿಷನರ್ಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.