ನವದೆಹಲಿ, ಫೆಬ್ರವರಿ 2: ಕೇಂದ್ರ ಬಜೆಟ್ 2021 ಬಗ್ಗೆ ಸವಾರಿ ಕಾರ್ ರೆಂಟಲ್ಸ್ ಸಿಇಒ ಗೌರವ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಹೆದ್ದಾರಿ ನಿರ್ಮಾಣ, ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದು ಸ್ವಾಗತ ಎಂದಿದ್ದಾರೆ. ಮುಂದಿನ ಆರ್ಥಿಕ ವರ್ಷದೊಳಗೆ 8,500 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ. ಇದು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಉತ್ತಮ ಸಂಪರ್ಕ ವನ್ನು ಖಚಿತಪಡಿಸುತ್ತದೆ. ಈ ವರ್ಷ ಜನರ ಪ್ರಯಾಣ ಆಯ್ಕೆಗಳಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ನಂತರ ರಸ್ತೆ ಪ್ರಯಾಣಗಳ ವಾಪಸಾತಿಯಿಂದ, ಹೆದ್ದಾರಿ ನಿರ್ಮಾಣದಲ್ಲಿ ಹೂಡಿಕೆ ಖಂಡಿತವಾಗಿಯೂ ಒಂದು ಉತ್ತೇಜನಕಾರಿ ನಡೆಯಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಪ್ರವಾಸ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರಮುಖ ಬೆಂಬಲವನ್ನು ಒದಗಿಸಲಿದೆ.
ಇದಲ್ಲದೆ, ಹಳೆಯ ಮತ್ತು ಅಯೋಗ್ಯ ವಾಹನಗಳನ್ನು ಹಂತ ಹಂತವಾಗಿ ಹೊರತರುವ ನಿಟ್ಟಿನಲ್ಲಿ ವಾಹನ ಗಳ ರದ್ದತಿ ನೀತಿಯನ್ನು ಜಾರಿಗೆ ತರುವುದು ಒಂದು ಉತ್ತಮ ಉಪಕ್ರಮವಾಗಿದೆ. ಇದು ಸ್ವಚ್ಛ ಮತ್ತು ಹಸಿರು ಭಾರತ ನಿರ್ಮಾಣಮಾಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ನಡೆ ಮಾತ್ರವಲ್ಲ, ದಕ್ಷ ಇಂಧನ ಬಳಕೆ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನು ಖಚಿತಪಡಿಸುವ ಮೂಲಕ ವಾಹನ ಮಾಲೀಕರಿಗೆ ಗಮನಾರ್ಹವಾಗಿ ನೆರವಾಗಲಿದೆ.