ಬೆಂಗಳೂರು, ಮೇ 18: ಉರಿವ ಮನೆಯಲ್ಲಿ ಗಳ ಹಿರಿಯುವುದು ಆಂದ್ರೆ ಇದೇ ಇರಬೇಕು. ಲಾಕ್ಡೌನ್ನಿಂದ ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳದಂತೆ, ರೈತರ ಪರವಾಗಿದ್ದ ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮಾತನಾಡಲು ಧಮ್ ಇಲ್ಲದ ಬಿಜೆಪಿ ಮುಖ್ಯಮಂತ್ರಿಗಳು, ಸಂಸದರು, ನಾಯಕರು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದೇ ಹಿನ್ನೆಲೆಯಲ್ಲಿ ರೈತರಿಗೆ ಅನ್ಯಾಯವಾಗುವುದಿಲ್ಲ ಅನ್ನೋದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಿ ಮಾತನಾಡುವ ತಾಕತ್ತು ಯಡಿಯೂರಪ್ಪ ಅವರಿಗೂ ಇಲ್ಲ. ಹೀಗಾಗಿ ಅವರೂ ಕೂಡ ರೈತ ವಿರೊಧಿ ಕಾನೂನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಅವರಿಗೆ ಬೇರೆ ಮಾರ್ಗವೇ ಇಲ್ಲ ಎಂದಿದ್ದಾರೆ ಕೋಡಿಹಳ್ಳಿ.
ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಮಾದರಿ ಕಾಯ್ದೆ ಜಾರಿಗೆ ತರುವುದರೊಂದಿಗೆ ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳಿಗೆ ಹೇಗೆ ನೆರವಾಗಿದ್ದಾರೆ ಎಂಬುದನ್ನು ಒನ್ಇಂಡಿಯಾ ಜೊತೆಗಿನ exclusive ಸಂದರ್ಶನದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿವರಿಸಿದ್ದಾರೆ.
ಮೋದಿ ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಅಷ್ಟೇ!
ಒನ್ಇಂಡಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಸಂಕಷ್ಟದಲ್ಲಿ ಆತ್ಮ್ನಿರ್ಭರ್ಭಾರತ ಎಂದು ಸ್ಥಳೀಕರಣ, ಸ್ವದೇಶಿ ಆಧ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ. ನೀವ್ಯಾಕೆ ಕಾರ್ಪೊರೇಟ್ ಕಂಪನಿಗಳಿಗೆ ಅನಕೂಲ ಮಾಡಿಕೊಡಲು ಎಪಿಎಂಸಿ ಕಾನೂನಿಗೆ ತಿದ್ದುಪಡಿ ತಂದಿದ್ದಾರೆ ಎಂದು ವಿರೋಧ ಮಾಡ್ತಿರೋದು?
ಕೋಡಿಹಳ್ಳಿ ಚಂದ್ರಶೇಖರ್: ಪ್ರಧಾನಿ ನರೇಂದ್ರ ಮೋದಿ ಒಬ್ಬ ಶುದ್ಧ ರೈತ ವಿರೋಧಿ ಮನುಷ್ಯ. ಮೋದಿಗೆ ಗ್ರಾಮೀಣ ಭಾರತದ ಬಗ್ಗೆ ಒಂದಿಷ್ಟು ಕಳಕಳಿಯೂ ಇಲ್ಲ, ಬದ್ಧತೆಯೂ ಇಲ್ಲ. ಯಾಕೆ ಅಂದರೆ ಅವರು ಇದೆಲ್ಲವನ್ನೂ ಮಾಡುತ್ತಿರುವುದೇ ಎಂಎನ್ಸಿಗಳನ್ನು ಬರಮಾಡಿಕೊಳ್ಳುವುದಕ್ಕೆ. ಇಲ್ಲಿ ಏನಿದೆ ಸ್ವದೇಶಿ? ಬದನೆಕಾಯಿ. ಎಂಎನ್ಸಿಗಳಿಗೆ ಅವಕಾಶ ಮಾಡಿಕೊಡುವುದಕ್ಕಾಗಿಯೇ ಕಾನೂನು ತಿದ್ದುಪಡಿ ಮಾಡುವಾಗ, ಸ್ವದೇಶಿ ಮಾತನಾಡುತ್ತಾರೆ ಇವರು. ಎಲ್ಲಾ ಚೈನಾದಿಂದ ಬನ್ನಿ, ಅಮೆರಿಕದಿಂದ ಬನ್ನಿ, ಇಲ್ಲಿ ನಿಮ್ಮನ್ನು ಉದ್ಧಾರ ಮಾಡೋದಕ್ಕೆ ಭೂಮಿ ಕೊಡ್ತೇವೆ, ನೀರು ಕೊಡ್ತೇವೆ, ವಿದ್ಯುತ್ ಕೊಡ್ತೇವೆ ಅನ್ನೋರು ಇವ್ರು ಸ್ವದೇಶಿನಾ? ಇವ್ರು ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಅಷ್ಟೇ!