ಬೆಂಗಳೂರು(ಮೇ.11): ಕರ್ನಾಟಕಕ್ಕೆ ಬರಬೇಕಾದ 5 ಸಾವಿರ ಕೋಟಿ ರೂ. ತಪ್ಪಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಪರಾಕಿ ಬಾರಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯಕ್ಕೆ 5,000 ಕೋಟಿ ರೂ. ಬರಬೇಕಿತ್ತು. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೀಗೆ ನಿರ್ಮಲಾ ಸೀತರಾಮನ್ ದ್ರೋಹ ಬಗೆದರು ಎಂದು ಕಿಡಿಕಾರಿದ್ದಾರೆ.
ಕೊರೋನಾ ಲಾಕ್ಡೌನ್ನಿಂದ ರಾಜ್ಯ ತತ್ತರಿಸಿ ಹೋಗಿದೆ. ಹಾಗಾಗಿ ಕೇಂದ್ರದಿಂದ 50 ಸಾವಿರ ಕೋಟಿ ರೂ. ಪ್ಯಾಕೇಜ್ ಕೇಳಿ ಎಂದು ಬಿ.ಎಸ್ ಯಡಿಯೂರಪ್ಪಗೆ ಹೇಳಿದ್ದೆ. ಆದರೆ, ಇವರು ಪ್ರಧಾನ ಮಂತ್ರಿ ಮೋದಿ ಬಳಿ ಕೇಳಿದ್ದರೋ ಇಲ್ಲವೋ ಗೊತ್ತಿಲ್ಲ. 35 ಸಾವಿರ ಕೋಟಿ ರೂ. ಪ್ರಧಾನಿ ನರೇಂದ್ರ ಮೋದಿ ಕೋವಿಡ್-19 ಪರಿಹಾರ ನಿಧಿಗೆ ಬಂದಿದೆ. ಕರ್ನಾಟಕದಿಂದ ಮೂರು ಸಾವಿರ ಕೋಟಿ ಹಣ ಹೋಗಿದೆ. ಈ ದುಡ್ಡನ್ನಾದರೂ ಮೋದಿ ಕೊಡೋದಕ್ಕೆ ಆಗಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಬರೀ ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎನ್ನುತ್ತಾರೆ. ಇದರಿಂದ ಬಡವರ ಕಷ್ಟ ನೀಗುತ್ತಾ? ಪಕ್ಷ ಈಗಲೂ ಒತ್ತಾಯ ಮಾಡುತ್ತಿದೆ. ಉಚಿತವಾಗಿ ಎಲ್ಲರನ್ನೂ ಕಳಿಸಬೇಕು, ಕರೆತರಬೇಕು. ಸೋನಿಯಾ ಗಾಂಧಿ ನಮಗೆ ಪತ್ರ ಬರೆದಿದ್ದಾರೆ. ಸಣ್ಣಪುಟ್ಟ ಕಸಬು ಮಾಡುವರ ಜೊತೆ ಸಭೆ ಮಾಡಿ ಸರ್ಕಾರಕ್ಕೆ ಪತ್ರ ಬರೆದೆ. ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.