ಮಂಡ್ಯ, ಜೂನ್ 7: ಒಂದು ಶುಗರ್ ಫ್ಯಾಕ್ಟರಿ ನಡೆಸೋಕೆ ಆಗದಷ್ಟು ಸರ್ಕಾರ ದಿವಾಳಿಯಾಗಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಸಿಎಂ ಭರವಸೆ ಕೊಟ್ಟಿರುವಂತೆ ಮೈಶುಗರ್ ಅನ್ನು ಸರ್ಕಾರವೇ ನಡೆಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕ ಕೆ.ಸುರೇಶ್ ಗೌಡ ಎಚ್ಚರಿಸಿದ್ದಾರೆ.
ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸುರೇಶ್ ಗೌಡ ಮಾತನಾಡಿ, ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ನೀಡಿರುವುದರ ಹಿಂದೆ ಅನುಮಾನ ಮೂಡಿಸುತ್ತಿದೆ. ಬಿಜೆಪಿ ಪಕ್ಷದ ಬಂಡಾಯ ಶಮನ ಮಾಡಲು ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಗ್ರೂಪ್ ಗೆ ನೀಡಿರುವುದು ಬಿಜೆಪಿಯಲ್ಲಿನ ಬಂಡಾಯ ಶಮನ ಮಾಡಲು ಎಂಬಂತಿದೆ. ಮೈಶುಗರ್ ಕಾರ್ಖಾನೆಯನ್ನು ಖಾಸಗಿಗೆ ನೀಡದೆ ಶೀಘ್ರವೇ ಸರ್ಕಾರಿ ಸ್ವಾಮ್ಯದಲ್ಲಿ ಆರಂಭಿಸಬೇಕೆಂದು ಒತ್ತಾಯಿಸಿದರು.