ಬೆಂಗಳೂರು, ಜ. 22: ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ಭರದಲ್ಲಿ ವಿಧಾನ ಪರಿಷತ್ನಲ್ಲಿ ಹೈಡ್ರಾಮಾ ನಡೆದಿತ್ತು. ಕೆಲವು ಸದಸ್ಯರು ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದರು. ಡಿಸೆಂಬರ್ 15 ರಂದು ವಿಧಾನ ಪರಿಷತ್ ವಿಶೇಷ ಕಲಾಪ ನಡೆಯುವಾಗ ಉಪ ಸಭಾಪತಿ ಎಸ್.ಎಲ್. ಧೆರ್ಮೇಗೌಡ ಅವರನ್ನು ಬಲವಂತವಾಗಿ ಸಭಾಪತಿ ಪೀಠದಿಂದ ಎಳೆದು ಹಾಕಲಾಗಿತ್ತು. ಅದೇ ಸಂದರ್ಭದಲ್ಲಿ ಕೆಲವು ಸದಸ್ಯರು ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಪ್ರವೇಶಿಸದಂತೆ ತಡೆದಿದ್ದರು.
ಘಟನೆಯಿಂದ ಸಭಾಪತಿ ಹಾಗೂ ಉಪ ಸಭಾಪತಿ ಇಬ್ಬರೂ ಮನನೊಂದಿದ್ದರು. ಆದರೆ ಮುಂದೆ ಎರಡು ದಿನಗಳಲ್ಲಿ ಘಟನೆಯನ್ನು ಅರಗಿಸಿಕೊಳ್ಳದೆ ತಾವು ಮಾಡದ ತಪ್ಪಿಗಾಗಿ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಧಾನ ಪರಿಷತ್ನಲ್ಲಿ ನಡೆದಿದ್ದ ಘಟನೆ ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದ್ದರೆ, ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಆತ್ಮಹತ್ಯೆ ರಾಜ್ಯದಲ್ಲಿ ಆತಂಕ ಸೃಷ್ಟಿಸಿತ್ತು.