ನವದೆಹಲಿ, ಜೂನ್ 08 : ಲಾಕ್ ಡೌನ್ ಪರಿಣಾಮ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಂದೇ ಭಾರತ್ ಮಿಷನ್ ಮೂಲಕ ವಾಪಸ್ ಕರೆತರಲಾಗಿತ್ತು. ಭಾರತೀಯ ನೌಕಾಪಡೆ ಇರಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಈಗ ಕಾರ್ಯಾಚರಣೆ ಆರಂಭಿಸಿದೆ.
ಕಳೆದ ತಿಂಗಳು ನೌಕಾಪಡೆ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ‘ಸಮುದ್ರ ಸೇತು’ ಕಾರ್ಯಾಚರಣೆ ನಡೆಸಿತ್ತು. ಜಲಾಶ್ವ ಮತ್ತು ಮಾಗರ್ ಹಡಗಿನ ಮೂಲಕ ಭಾರತೀಯರನ್ನು ಕರೆತರಲಾಗಿತ್ತು.
2,874 ಜನರು ಮಾಲ್ಡೀವ್ಸ್ ಮತ್ತು ಶ್ರೀಲಂಕಾದಿಂದ ಕೊಚ್ಚಿನ್ ಮತ್ತು ಟ್ಯುಟಿಕೋರಿನ್ ಬಂದರಿಗೆ ‘ಸಮುದ್ರ ಸೇತು’ ಕಾರ್ಯಾಚರಣೆಯ ಮೂಲಕ ಆಗಮಿಸಿದ್ದರು. 2ನೇ ಹಂತದ ಕಾರ್ಯಾಚರಣೆ ಭಾಗವಾಗಿ ಐಎನ್ಎಸ್ ಶಾರ್ದೂಲ್ ಸಂಚಾರ ನಡೆಸಿತ್ತು.
‘ಸಮುದ್ರ ಸೇತು’ ಅನ್ವಯ ಭಾರತೀಯರನ್ನು ವಾಪಸ್ ಕರೆತರುವಾಗ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ – 19 ಹಡರದಂತೆ ತಡೆಯುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಹಡಗಿನಲ್ಲಿ ಪಿಪಿಇ ಕಿಟ್ಗಳು ಇದ್ದು, ವೈದ್ಯರು ಮತ್ತು ಸಹಾಯಕ ಸಿಬ್ಬಂದಿಗಳು ಸಹ ಇದ್ದಾರೆ.