ನವದೆಹಲಿ, ಜೂನ್ 5: ಇಡೀ ದೇಶವೇ ಕೊರೊನಾ ಮಹಾಮಾರಿಗೆ ತುತ್ತಾಗಿದೆ. ಕೇಂದ್ರ ಸರ್ಕಾರವು ಕೂಡ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ.
ಹಾಗಾಗಿ ಈ ವರ್ಷ ಯಾವುದೇ ಹೊಸ ಯೋಜನೆಗಳ ಘೋಷಣೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಕೇಂದ್ರ ವಿತ್ತ ಸಚಿವಾಲಯ ಆದೇಶ ಹೊರಡಿಸಿದ್ದು, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಕ್ರೂಢೀಕರಿಸಬೇಕಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಕೇಂದ್ರ ಸರ್ಕಾರ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡುವುದಿಲ್ಲ ಎಂದು ಹೇಳಿದೆ. ದೇಶದಲ್ಲಿ ಈ ವರೆಗೂ 2,26,770 ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು, ಮಹಾಮಾರಿ ವೈರಸ್’ಗೆ ಸುಮಾರು 6,348 ಮಂದಿ ಸಾವನ್ನಪ್ಪಿದ್ದಾರೆ.
ಪ್ರಮುಖವಾಗಿ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಗೆ ಅನುದಾನ ದೊರೆಯಲಿದ್ದು, ಉಳಿದೆಲ್ಲಾ ಯೋಜನೆಗಳಿಗೆ ಪ್ರಸ್ತುತ ಇರುವ ಅನುದಾನವನ್ನಷ್ಟೇ ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಪ್ರಸ್ತಾವನೆಯನ್ನು ಸ್ಥಗಿತಗೊಳಿಸಬೇಕು. ಹಣಕಾಸು ಇಲಾಖೆಯು ಯಾವ ಹೊಸ ಯೋಜನೆಗಳಿಗೂ ಅನುದಾನವನ್ನು ನೀಡುವುದಿಲ್ಲ.