ನವದೆಹಲಿ(ಮೇ 13): ಕೊರೋನಾ ವೈರಸ್ ಸೋಂಕಿನಿಂದ ಸೃಷ್ಟಿಯಾಗಿರುವ ಮಹಾ ಬಿಕ್ಕಟ್ಟಿಗೆ ಸಿಕ್ಕು ಬಹುತೇಕ ರಾಷ್ಟ್ರಗಳು ಅತೀವ ಸಂಕಷ್ಟಕ್ಕೆ ಸಿಲುಕಿವೆ. ಸೋಂಕು ನಿಗ್ರಹಿಸುವುದರ ಜೊತೆಗೆ ಆರ್ಥಿಕತೆಯನ್ನು ಮೇಲೆತ್ತುವುದೇ ಎಲ್ಲಾ ದೇಶಗಳ ಚಿಂತೆಯಾಗಿದೆ. ಹಲವು ದೇಶಗಳು ಆರ್ಥಿಕ ಪುನಶ್ಚೇತನಕ್ಕಾಗಿ ವಿವಿಧ ಕ ್ರಮಗಳನ್ನು ಕೈಗೊಂಡಿವೆ. ಉತ್ತೇಜಕ ಪ್ಯಾಕೇಜ್ಗಳನ್ನ ಘೋಷಿಸಿದ್ಧಾರೆ. ನಿನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ ಮೊತ್ತದ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ತಿಳಿಸಿದ್ದಾರೆ.
ಇದು ಕಡಿಮೆ ಮೊತ್ತವಲ್ಲ. ನಮ್ಮ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 10 ಭಾಗ ಇದಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಪ್ಯಾಕೇಜ್ ಘೋಷಿಸಿದ ದೇಶಗಳು ವಿರಳ. ಜಿಡಿಪಿಯ ಭಾಗದ ಆಧಾರದಲ್ಲಿ ಭಾರತ ಘೋಷಿಸಿದ ಪ್ಯಾಕೇಜ್ ವಿಶ್ವದಲ್ಲಿ 3ನೇ ಗರಿಷ್ಠ ಮೊತ್ತ ಎನಿಸಿದೆ. ಮೊದಲೆರಡು ಸ್ಥಾನ ಜಪಾನ್ ಮತ್ತು ಅಮೆರಿಕಕ್ಕೆ ಹೋಗುತ್ತದೆ.
ಜಪಾನ್ ಸರ್ಕಾರ ತನ್ನ ಜಿಡಿಪಿಯ ಶೇ. 21 ಭಾಗದ ಮೊತ್ತವನ್ನು ಸ್ಟಿಮುಲಸ್ ಪ್ಯಾಕೇಜ್ ಆಗಿ ಘೋಷಿಸಿದೆ. ಅಮೆರಿಕ ಸರ್ಕಾರ ಕೂಡ ಜಿಡಿಪಿಯ ಶೇ. 13ರಷ್ಟು ಇರುವ ಹಣವನ್ನು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಕಟಿಸಿದೆ. ಇದು ಬಿಟ್ಟರೆ ಬೇರೆ ಯಾವ ದೇಶಗಳೂ ಕೂಡ ಭಾರತದಕ್ಕಿಂತ ಹೆಚ್ಚು ಮೊತ್ತದ ಉತ್ತೇಜಕ ಪ್ಯಾಕೇಜ್ಗಳನ್ನ ಘೋಷಿಸಿಲ್ಲ.
ಆದರೆ, ನಿನ್ನೆ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ರೂ ಉತ್ತೇಜಕ ಪ್ಯಾಕೇಜ್ನಲ್ಲಿ ಕೊರೋನಾ ಬಿಕ್ಕಟ್ಟು ಉದ್ಭವಿಸಿದ ನಂತರ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಪ್ರಕಟಿಸಿದ ಕೆಲ ಪ್ಯಾಕೇಜ್ಗಳೂ ಅಡಕವಾಗಿವೆ. ಇವೆಲ್ಲವೂ 6.5 ಲಕ್ಷ ಕೋಟಿ, ಅಂದರೆ ಜಿಡಿಪಿಯ ಶೇ 3.2 ಭಾಗದ ಹಣ ಈಗಾಗಲೇ ಪ್ರಕಟವಾಗಿದೆ. ಇನ್ನುಳಿದ ಹಣದ ವಿನಿಯೋಗ ಹೇಗೆಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ದಿನಗಳಲ್ಲಿ ತಿಳಿಸುತ್ತಾರೆ.