ನವದೆದಹಲಿ, ಜೂನ್.08: ಭಾರತದಲ್ಲಿ ಕೊರೊನಾ ವೈರಸ್ ಮಹಾಸ್ಫೋಟದ ನಡುವೆಯೂ ಕೇಂದ್ರ ಗೃಹ ಸಚಿವಾಲಯವು ಕೆಲವು ವಲಯಗಳಿಗೆ ಬಿಗ್ ರಿಲೀಫ್ ನೀಡಿದೆ. ಜೂನ್.01ರಿಂದ ಆರಂಭವಾದ 5ನೇ ಅವಧಿಯ ಲಾಕ್ ಡೌನ್ ನ್ನು ಅನ್ ಲಾಕ್ 1.0 ಎಂದೇ ಕರೆಯಲಾಗುತ್ತಿದೆ.
ದೇಶದಲ್ಲಿ ಇರುವ ಕಂಟೇನ್ಮೆಂಟ್ ಝೋನ್ ಗಳಿಂದ ಹೊರಗಿರುವ ಬಹುತೇಕ ವಲಯಗಳಿಗೆ ಕಂದ್ರ ಸರ್ಕಾರವು ಈ ಹಿಂದಿನ ನಿಯಮಗಳನ್ನು ಸಡಿಲಿಕೆ ಮಾಡಿದೆ. ಜೂನ್.30ರವರೆಗೂ ಈ ನಿಯಮ ಸಡಿಲಿಕೆ ಜಾರಿಯಲ್ಲಿ ಇರಲಿದೆ.
ಕೇಂದ್ರ ಗೃಹ ಸಚಿವಾಲಯವು ನೀಡಿರುವ ಹೊಸ ಮಾರ್ಗಸೂಚಿ ಹಿನ್ನೆಲೆ ಭಾರತೀಯ ವಿಮಾನಯಾನ ಪ್ರಾಧಿಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರ ಅನುಕೂಲಕ್ಕಾಗಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಆರಂಭಿಸಿದೆ. ವಿಮಾನ ಹಾರಾಟದ ವೇಳಾಪಟ್ಟಿ ಬದಲಿಸಿದ್ದು 1/3 ಪ್ರಮಾಣದಲ್ಲಿ ವಿಮಾನಗಳು ಸಂಚಾರ ನಡೆಸಲಿವೆ.
ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆ ಪ್ರತಿಯೊಬ್ಬ ಪ್ರಯಾಣಿಕರಿಗೂ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅತಿಹೆಚ್ಚು ಸೋಂಕಿತ ಪ್ರಕರಣಗಳಿರುವ ಪ್ರದೇಶದಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು. ಪ್ರಯಾಣಿಕರು ಆಗಮಿಸುತ್ತಿರುವ ಸ್ಥಳ, ವಿಳಾಸದ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ಒಂದು ವೇಳೆ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಪ್ರಯಾಣಿಕನು ಕಂಟೇನ್ಮೆಂಟ್ ವಲಯಗಳಿಂದ ಆಗಮಿಸಿದ್ದಲ್ಲಿ ಪ್ರಯಾಣಕ್ಕೆ ಅವಕಾಶವನ್ನು ನಿರಾಕರಿಸಲಾಗುತ್ತದೆ.