ಭುವನೇಶ್ವರ, ಮೇ 17 : ಅಂಫಾನ್ ಚಂಡಮಾರುತದ ಪ್ರಭಾವದಿಂದ ಮುಂದಿನ 24 ಗಂಟೆಯಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಡಿಶಾ ರಾಜ್ಯಕ್ಕೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಭುವನೇಶ್ವರದಲ್ಲಿರುವ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಚ್. ಆರ್. ಬಿಸ್ವಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ. “ಮುಂದಿನ 12 ಗಂಟೆಗಳ ಅವಧಿಯಲ್ಲಿ ಅಂಫಾನ್ ಚಂಡಮಾರುತ ತೀವ್ರಗೊಳ್ಳಲಿದೆ. ಸೋಮವಾರ ಮುಂಜಾನೆ ವೇಳೆಗೆ ತೀವ್ರತೆ ಹೆಚ್ಚಾಗಲಿದೆ” ಎಂದು ಹೇಳಿದ್ದಾರೆ.
“ಭಾನುವಾರ ರಾತ್ರಿಯ ತನಕ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಸೋಮವಾರ ಮೀನುಗಾರಿಕಾ ಚಟುವಟಿಕೆಗೆ ನಿಷೇಧ ಹೇರಲಾಗಿದೆ” ಎಂದು ಎಚ್. ಆರ್. ಬಿಸ್ವಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಂಫಾನ್ ಚಂಡಮಾರುತದ ಪ್ರಭಾವದಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೋವಿಡ್ – 19 ಹೋರಾಟದಲ್ಲಿ ತೊಡಗಿರುವ ರಾಜ್ಯಗಳು ಹವಾಮಾನ ಇಲಾಖೆ ಮುನ್ಸೂಚನೆಯತ್ತಲೂ ಗಮನಹರಿಸಿವೆ.
ಒಡಿಶಾ ಸರ್ಕಾರ ಶುಕ್ರವಾರದಿಂದಲೇ 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಕೊರೊನಾ ತಡೆಯಲು ಲಾಕ್ ಜಾರಿಯಲ್ಲಿರುವ ಕಾರಣ ಜನರು ಮನೆಯಲ್ಲಿಯೇ ಇದ್ದಾರೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಪರಿಸ್ಥಿತಿ ಎದುರಿಸಲು ಸಿದ್ಧವಾಗಿ ಇರುವಂತೆ ನಿರ್ದೇಶನ ನೀಡಲಾಗಿದೆ.
ಒಡಿಶಾದ ಉತ್ತರ ಕರಾವಳಿಯಲ್ಲಿ ಚಂಡಮಾರುತದಿಂದ ಹಾನಿಯಾದರೆ ಜನರಿಗೆ ಆಶ್ರಯ ನೀಡಲು ಕಟ್ಟಡ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಶ್ರಯ ನೀಡುವ ಕಟ್ಟಡಗಳು ಈಗಾಗಲೇ ಕೋವಿಡ್ – 19 ಕ್ವಾರಂಟೈನ್ಗೆ ಬಳಕೆ ಮಾಡಲಾಗುತ್ತಿದೆ.