ಕೊರೋನಾ ಅಟ್ಟಹಾಸ: ಅಮೆರಿಕದಲ್ಲಿ ಒಂದೇ ದಿನ 2,400ಕ್ಕೂ ಹೆಚ್ಚು ಬಲಿ; 6.44 ಲಕ್ಷ ಜನರಿಗೆ ಸೋಂಕು!
ವಾಷಿಂಗ್ಟನ್ (ಏ. 16): ವಿಶ್ವವನ್ನೇ ಆವರಿಸಿರುವ ಕೊರೋನಾ ವೈರಸ್ಗೆ ವಿಶ್ವದ ದೊಡ್ಡಣ್ಣನೆಂದೇ ಕರೆಸಿಕೊಳ್ಳುವ ಅಮೆರಿಕ ಕೂಡ ತತ್ತರಿಸಿಹೋಗಿದೆ. ಚೀನಾದಿಂದ ಶುರುವಾದ ಕೊರೋನಾ ಅಟ್ಟಹಾಸ ಈಗ ಅಮೆರಿಕವನ್ನು ಕಾಡತೊಡಗಿದೆ. ಈಗಾಗಲೇ ಅಮೆರಿಕದಲ್ಲಿ 28,529 ಜನ ಕೊರೋನಾಗೆ ಬಲಿಯಾಗಿದ್ದು, ನಿನ್ನೆ ಒಂದೇ ದಿನ 2,400ಕ್ಕೂ ಹೆಚ್ಚು ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ಜಗತ್ತಿನಾದ್ಯಂತ ಕೊರೋನಾ ವೈರಸ್ಗೆ 1,34,616 ಜನರು ಸಾವನ್ನಪ್ಪಿದ್ದಾರೆ. 20,83,304 ಜನರಿಗೆ ಕೊರೋನಾ ಸೋಂಕು ತಗುಲಿದೆ. ಅಮೆರಿಕದಲ್ಲಿ ಕೊರೋನಾದಿಂದ ಒಟ್ಟು 28,529 ಜನರು ಸಾವನ್ನಪ್ಪಿದ್ದು, 6,44,089 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 48,708 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಮೆರಿಕದ ನ್ಯೂಯಾರ್ಕ್ ನಗರವೊಂದರಲ್ಲೇ ಇದುವರೆಗೂ 10,899 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ನಲ್ಲಿ ಕೂಡ ಕೊರೋನಾ ಅಬ್ಬರ ಮುಂದುವರೆದಿದ್ದು, ನಿನ್ನೆ ಒಂದೇ ದಿನ 2,438 ಜನರು ಸಾವನ್ನಪ್ಪಿದ್ದಾರೆ. ಇದು ಫ್ರಾನ್ಸ್ನ ಇದುವರೆಗಿನ ಒಂದು ದಿನದ ಕೊರೋನಾ ಸಾವಿನ ಸಂಖ್ಯೆಯಲ್ಲಿ ಅತ್ಯಧಿಕವಾಗಿದೆ.
ಅಮೆರಿಕದಲ್ಲಿ ಬುಧವಾರ ಒಂದೇ ದಿನ 2,400ಕ್ಕೂ ಹೆಚ್ಚು ಜನರು ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿದ ದೇಶ ಎನಿಸಿಕೊಂಡಿದೆ. ಈ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಾವಿನ ಮತ್ತು ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೊಸ ಮಾರ್ಗ ಸೂಚಿಗಳನ್ನು ತರಲಾಗುವುದು. ಜಗತ್ತಿನಲ್ಲಿ ಯಾವುದೇ ದೇಶದಲ್ಲಾಗದಷ್ಟು ಸಾವು-ನೋವಿನ ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದೆ ಎಂದಿದ್ದಾರೆ.