EBM News Kannada
Leading News Portal in Kannada

ಪಾಕ್‌ ಚುನಾವಣೆಯಲ್ಲಿ ಉಗ್ರ ಹಫೀಜ್‌ನ ಮಗ, ಅಳಿಯ ಸ್ಪರ್ಧೆ

ಲಾಹೋರ್‌: ಜುಲೈ 25ರಂದು ನಡೆಯುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮುಂಬೈ ದಾಳಿಯ ರೂವಾರಿ ಹಫೀಜ್‌ ಸಯೀದ್‌ನ ಉಗ್ರ ಸಂಘಟನೆಯ 265 ಸ್ಪರ್ಧಿಗಳಲ್ಲಿ ಹಫೀಜ್‌ನ ಮಗ ಮತ್ತು ಅಳಿಯ ಕೂಡ ಸೇರಿದ್ದಾರೆ. ತಾಂತ್ರಿಕ ಕಾರಣಗಳಿಂದ ಹಫೀಜ್‌ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಲಷ್ಕರೆ ತಯ್ಯಬಾದ ಮುಖವಾಣಿಯಾಗಿರುವ ಜೆಯುಡಿ, 2008ರಲ್ಲಿ ಮುಂಬೈ ದಾಳಿಯನ್ನು ನಡೆಸಿದ್ದು, ಮಿಲ್ಲಿ ಮುಸ್ಲಿಂ ಲೀಗ್‌(ಎಂಎಂಎಲ್‌) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದೆ. ಆದರೆ ಎಂಎಂಎಲ್‌ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಲು ಪಾಕ್‌ ಚುನಾವಣಾ ಆಯೋಗ ನಿರಾಕರಿಸಿದೆ. ಇದರ ಬೆನ್ನಲ್ಲೇ ಅಲ್ಲಾಹು ಅಕ್ಬರ್‌ ತೆಹ್ರೀಕ್‌(ಎಎಟಿ) ಪಕ್ಷದೊಂದಿಗೆ ಎಂಎಂಎಲ್‌ ಮೈತ್ರಿ ಮಾಡಿಕೊಂಡಿದ್ದು, ಎಎಟಿ ಪಕ್ಷದ ಅಡಿಯಲ್ಲಿ ಎಂಎಂಎಲ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

”ಹಫೀಜ್‌ ಸಯೀದ್‌ ಅವರ ಮಗ ಹಫೀಜ್‌ ತಲ್ಹಾ ಸಯೀದ್‌ ಸರ್ಗೋಧಾ ಕ್ಷೇತ್ರದಿಂದ ಮತ್ತು ಅಳಿಯ ಹಫೀಜ್‌ ಖಾಲಿದ್‌ ವಲೀದ್‌ ಲಾಹೋರ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಕ್ಷದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ಚುನಾವಣಾ ಅಧಿಕಾರಿಗಳಿಂದ ಸ್ವೀಕೃತವಾಗಿದೆ. ಇವರಲ್ಲಿ 80 ಮಂದಿ ರಾಷ್ಟೀಯ ಸಂಸತ್‌ಗೆ ಮತ್ತು 185 ಮಂದಿ ಪ್ರಾಂತೀಯ ಅಸೆಂಬ್ಲಿಗಳಿಗೆ ಸ್ಪರ್ಧಿಸುತ್ತಿದ್ದಾರೆ,” ಎಂದು ಎಂಎಂಎಲ್‌ ಹೇಳಿಕೆ ತಿಳಿಸಿದೆ.