ಟಿ20 ವಿಶ್ವಕಪ್ ತಂಡದಲ್ಲಿ ನಾನು ಕೂಡ ಇರಲಿದ್ದೇನೆ..!
ಕರ್ನಾಟಕದ ಕ್ರಿಕೆಟಿಗ ರಾಬಿನ್ ಉತ್ತಪ್ಪ 2007ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಂ ಇಂಡಿಯಾದ ಸದಸ್ಯರಾಗಿದ್ದರು. ಏಕದಿನ, ಟಿ20 ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ರಾಬಿನ್ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ರಾಹುಲ್ ದ್ರಾವಿಡ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಕೂಡ ಗಿಟ್ಟಿಸಿಕೊಂಡಿದ್ದರು.
ಆದರೆ ಒಮ್ಮೆ ತಂಡದಿಂದ ಹೊರಬಿದ್ದ ರಾಬಿನ್ ಉತ್ತಪ್ಪ ಆ ಬಳಿಕ ತಂಡದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳುವಲ್ಲಿ ಎಡವಿದ್ದರು. ಇದಕ್ಕೆ ಸಾಕ್ಷಿ ಎಂದರೆ ಉತ್ತಪ್ಪ ಕೊನೆಯ ಬಾರಿ ಟೀಂ ಇಂಡಿಯಾ ಪರ ಆಡಿದ್ದು 2015 ರಲ್ಲಿ.ಆದರೆ ಅದಾಗ್ಯೂ ಉತ್ತಪ್ಪ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದರು.
ಇತ್ತ ಏಕದಿನ ತಂಡದಿಂದ ಹೊರಬಿದ್ದಿದ್ದರೂ ರಾಬಿನ್ ಟಿ20 ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ ಎಂದೇ ಹಲವರು ಭಾವಿಸಿದ್ದರು. ಆದರೆ 2015 ರಲ್ಲಿ ಕೊನೆಯ ಬಾರಿ ಜಿಂಬಾಬ್ವೆ ವಿರುದ್ಧ ಟಿ20 ಆಡಿದ್ದ ಕೊಡಗಿನ ಕುವರನಿಗೆ ಆ ಬಳಿಕ ಅವಕಾಶಗಳೇ ಸಿಕ್ಕಿರಲಿಲ್ಲ. ಆದರೆ ಈಗಲೂ ತಾನು ಟೀಂ ಇಂಡಿಯಾಗೆ ಮರಳುವ ಸತತ ಪ್ರಯತ್ನದಲ್ಲಿರುವುದಾಗಿ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ. ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಅಂದಿದ್ದಾರೆ.
ನಾನು ಸ್ಪರ್ಧಾತ್ಮಕವಾಗಿರಲು ಬಯಸುತ್ತೇನೆ. ಅಂತಹದೊಂದು ಕಿಚ್ಚು ಈಗಲೂ ನನ್ನೊಳಗಿದೆ. ನಾನು ನಿಜವಾಗಿಯೂ ಸ್ಪರ್ಧಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ನನ್ನ ಗುರಿ ಈಗ ವಿಶ್ವಕಪ್ 2020. ಅದಕ್ಕಾಗಿ ನಾನು ಈಗಲೂ ಕಠಿಣ ಪರಿಶ್ರಮದಲ್ಲಿದ್ದೇನೆ ಎಂದು ಉತ್ತಪ್ಪ ಹೇಳಿದ್ದಾರೆ.