EBM News Kannada
Leading News Portal in Kannada

ಈ ವರ್ಷ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ 50 ಉಗ್ರರ ಹತ್ಯೆ

ಜಮ್ಮು(ಏ.24): ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೋಯ್ಬಾ (ಎಲ್‌ಇಟಿ)ಯ ಹಲವು ಟಾಪ್ ಕಮಾಂಡರ್‌ಗಳು ಸೇರಿದಂತೆ ಐವತ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ 17 ಭದ್ರತಾ ಪಡೆಗಳ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಉಗ್ರರು ಒಂಬತ್ತು ನಾಗರಿಕರನ್ನು ಕೊಂದಿದ್ದಾರೆ ಎಂದರು.

ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಜೆಇಎಂ, ಎಲ್‌ಇಟಿ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಕಮಾಂಡರ್‌ಗಳು ಸೇರಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಹತ್ಯೆಯಾದ 50 ಭಯೋತ್ಪಾದಕರ ಪೈಕಿ 18 ಮಂದಿಯನ್ನು ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಕೊಲ್ಲಲಾಗಿದೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಮಾರ್ಚ್ 15 ರಂದು ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ದಯಲ್​ಗಮ್ ಪ್ರದೇಶದಲ್ಲಿ ನಡೆದ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಲಷ್ಕರೆ ಕಮಾಂಡರ್ ಮುಜಫರ್ ಅಹ್ಮದ್ ಭಟ್ ಸೇರಿದಂತೆ ನಾಲ್ವರು ಭಯೋತ್ಪಾದಕರು ಸಾವನ್ನಪ್ಪಿದ್ದರು ಎಂದರು.

ಜನವರಿ 25 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಅಲ್ಟ್ರಾಗಳ ನಡುವಿನ ಮುಖಾಮುಖಿಯಲ್ಲಿ ಜೈಶ್​ ಕಾಶ್ಮೀರ ವಿಭಾಗದ ಮುಖ್ಯಸ್ಥ ಎನ್ನಲಾದ ಖಾರಿ ಯಾಸಿರ್ ಸೇರಿದಂತೆ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದರೆ, ಮೂವರು ಸೈನಿಕರು ಗಾಯಗೊಂಡಿದ್ದರು ಎಂದು ತಿಳಿಸಿದರು.

ಜನವರಿ 23 ರಂದು ಪುಲ್ವಾಮಾ ಜಿಲ್ಲೆಯ ಖ್ರೂ ಪ್ರದೇಶದಲ್ಲಿ ಯಾಸಿರ್ ಅವರ ಸಹವರ್ತಿಯಾದ ಮತ್ತೊಬ್ಬ ಟಾಪ್ ಉಗ್ರ ಕಮಾಂಡರ್ ಅಬು ಸೈಫುಲ್ಲಾ ಅಲಿಯಾಸ್ ಅಬು ಖಾಸಿಮ್ ಸಾವನ್ನಪ್ಪಿದ್ದಾನೆ ಎಂದರು.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್‌ನಲ್ಲಿ ಏಪ್ರಿಲ್ 9 ರಂದು ಜೈಶ್-ಎ-ಮೊಹಮ್ಮದ್ ಕಮಾಂಡರ್ ಸಜಾದ್ ನವಾಬ್ ದಾರ್ ಭದ್ರತಾ ಪಡೆಯ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾನೆ.ಜನವರಿ 15 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾದ ಗುಂಡಾನಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹರೂನ್ ವಾನಿ ಸಾವನ್ನಪ್ಪಿದ್ದಾನೆ. ಮಾರ್ಚ್ 14 ರಿಂದ 18 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ವರ್ಷದಲ್ಲಿ ಒಂಬತ್ತು ನಾಗರಿಕರು ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಿದ್ದಾರೆ.