EBM News Kannada
Leading News Portal in Kannada

Plasma Therapy – ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ – ಉತ್ತಮ ಫಲಿತಾಂಶ ನೀಡಿದ ಪ್ರಯೋಗ: ಅರವಿಂದ್ ಕೇಜ್ರಿವಾಲ್

ನವದೆಹಲಿ(ಏ. 24): ಕೊರೋನಾ ವೈರಸ್ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಯನ್ನೂ ಒಳಗೊಂಡಂತೆ ನಾಲ್ವರು ಕೋವಿಡ್-19 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ನಡೆಸಲಾಗಿತ್ತು. ಅವರೆಲ್ಲರೂ ಗುಣಮುಖರಾಗಿದ್ದಾರೆ. ಇದು ಶುಭ ಸೂಚನೆ ಎಂದು ಕೇಜ್ರಿವಾಲ್ ಹೇಳಿದರು.

ಮುಂದಿನ ಕೆಲ ದಿನಗಳಲ್ಲಿ ಪ್ಲಾಸ್ಮಾ ಥೆರಪಿಯ ಇನ್ನಷ್ಟು ಪ್ರಯೋಗ ಮಾಡಲಾಗುವುದು. ಅವು ಯಶಸ್ವಿಯಾದ ನಂತರ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಕೇಂದ್ರ ಸರ್ಕಾರ ಒಪ್ಪಿದರೆ, ಗಂಭೀರ ಸ್ಥಿತಿಯಲ್ಲಿರುವ ಎಲ್ಲಾ ಕೋವಿಡ್-19 ರೋಗಿಗಳಿಗೂ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗುವುದು ಎಂದು ದೆಹಲಿ ಸಿಎಂ ತಿಳಿಸಿದರು.

ಕಳೆದ ಕೆಲ ದಿನಗಳಿಂದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ನಾಲ್ಕು ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ಮಾಡಿದೆವು. ಚಿಕಿತ್ಸೆಗೆ ಇಲ್ಲಿಯವರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಇಬ್ಬರು ಸಂಪೂರ್ಣ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಗೆ ಸಿದ್ಧವಿದ್ದಾರೆ. ಆ ಇಬ್ಬರಲ್ಲಿ ಒಬ್ಬರ ಸ್ಥಿತಿ ಸಂಪೂರ್ಣ ಗಂಭೀರವಿತ್ತು. ಅವರೂ ಗುಣಮುಖರಾಗಿರುವುದು ವಿಶೇಷ. ಇದು ಆರಂಭಿಕ ಫಲಿತಾಂಶವಾದ್ದರಿಂದ ಕೊರೊನಾವೈರಸ್​ಗೆ ಚಿಕಿತ್ಸೆ ಸಿಕ್ಕಿತೆಂದು ಭಾವಿಸಬೇಕಿಲ್ಲ. ಆದರೆ, ನಮಗೆ ಒಂದು ಆಶಾಕಿರಣ ಮಾತ್ರ ಸಿಕ್ಕಿದೆ ಎಂದು ಕೇಜ್ರಿವಾಲ್ ಆಶಿಸಿದರು.

ಇದನ್ನೂ ಓದಿ: ಲಾಕ್​ಡೌನ್​ ಉಲ್ಲಂಘನೆ; 6 ತಿಂಗಳ ಶಿಶು, 3 ವರ್ಷದ ಮಗು ವಿರುದ್ಧ ಕೇಸ್ ದಾಖಲು!

ಕೊರೋನಾ ರೋಗದಿಂದ ಗುಣಮುಖರಾದವರು ತಮ್ಮ ದೇಹದ ಪ್ಲಾಸ್ಮಾವನ್ನು ದಾನ ಮಾಡಬೇಕೆಂದು ಕರೆ ನೀಡಿದ ಕೇಜ್ರಿವಾಲ್, ಈ ಪ್ಲಾಸ್ಮಾದಿಂದ ಸಾವಿನಂಚಿನಲ್ಲಿರುವ ಕೋವಿಡ್ ರೋಗಿಗಳನ್ನು ಬದುಕಿಸಬಹುದು ಎಂದರು.

ಕೊರೋನಾ ಸೋಂಕಿನಿಂದ ತೀವ್ರ ಬಾಧಿತರಾಗಿ, ನಂತರ ಚೇತರಿಸಿಕೊಂಡಿರುವ ವ್ಯಕ್ತಿಗಳ ಪ್ಲಾಸ್ಮಾವನ್ನು ರೋಗಿಗಳ ಪ್ಲಾಸ್ಮಾಗೆ ಬೆರೆಸುವುದೇ ಪ್ಲಾಸ್ಮಾ ಥೆರಪಿಯಾಗಿದೆ. ಕೇರಳದಲ್ಲಿ ಈ ಹಿಂದೆ ಬೇರೆ ಪ್ರಕರಣಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿತ್ತು. ಈಗ ಕೋವಿಡ್-19 ರೋಗಿಗಳಿಗೆ ಇದರ ಪ್ರಯೋಗ ಮಾಡಲಾಗಿದೆ. 10 ರೋಗಿಗಳನ್ನು ಗುಣಮುಖ ಮಾಡಲು ಸಾಧ್ಯವಾದರೆ ಅದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.