EBM News Kannada
Leading News Portal in Kannada

Sonia Gandhi: ಕೋವಿಡ್-19 ನಿಭಾಯಿಸುವ ಬದಲು ಬಿಜೆಪಿ ಕೋಮು-ದ್ವೇಷದ ವೈರಸ್ ಹರಡುತ್ತಿದೆ; ಸೋನಿಯಾ ಗಾಂಧಿ ಆರೋಪ

ನವದೆಹಲಿ: ಬಿಜೆಪಿ ದೇಶದಲ್ಲಿ ಕೋಮು – ದ್ವೇಷದ ವೈರಸ್ ಹರಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಪ್ರತಿಯೊಬ್ಬ ಭಾರತೀಯರನ್ನೂ ಇದು ಚಿಂತೆಗೀಡು ಮಾಡಿದೆ ಮತ್ತು ಈ ಹಾನಿಯನ್ನು ಸರಿಪಡಿಸಲು ಕಾಂಗ್ರೆಸ್ ಪಕ್ಷ ಶ್ರಮಿಸಬೇಕಾಗುತ್ತದೆ ಎಂದಿದ್ದಾರೆ.

ನಮ್ಮಲ್ಲಿ ಪ್ರತಿಯೊಬ್ಬರೂ ಚಿಂತೆ ಮಾಡುವಂತಹ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಾವು ಕೊರೋನಾ ವೈರಸ್ ಅನ್ನು ಒಗ್ಗಟ್ಟಿನಿಂದ ನಿಭಾಯಿಸಬೇಕಾದ ಸಮಯದಲ್ಲಿ, ಬಿಜೆಪಿ ಕೋಮು- ದ್ವೇಷದ ವೈರಸ್ ಅನ್ನು ಹರಡುತ್ತಲೇ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನಮ್ಮ ಸಮಾಜದಲ್ಲಿ ಸಾಮರಸ್ಯ ಹದಗೆಟ್ಟಿದೆ. ನಮ್ಮ ಪಕ್ಷ, ಆ ಹಾನಿಯನ್ನು ಸರಿಪಡಿಸಲು ನಾವು ಶ್ರಮಿಸಬೇಕಾಗಿದೆ ಎಂದು ಅವರು ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕಳೆದ ಮೂರು ವಾರಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಹೆಚ್ಚಾಗಿದೆ ಮತ್ತು ಇದಕ್ಕಾಗಿ ಪರೀಕ್ಷೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಲಾಕ್‌ಡೌನ್ ಜಾರಿಯಾದಾಗಿನಿಂದ ತಾನು ಹಲವಾರು ಬಾರಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೇನೆ ಮತ್ತು ಹಲವಾರು ಕ್ರಮಗಳನ್ನು ಸೂಚಿಸಿದ್ದೇನೆ ಎಂದು ಗಾಂಧಿ ಹೇಳಿದರು.ಆರೋಗ್ಯ, ಆಹಾರ ಸುರಕ್ಷತೆ ಮತ್ತು ಜೀವನೋಪಾಯದ ವಿಷಯಗಳಲ್ಲಿ ಯಶಸ್ವಿಯಾಗಿ ತೊಡಗಿಸಿಕೊಳ್ಳುವಲ್ಲಿ ಪಕ್ಷದ ಗಮನವು ಮುಂದುವರಿಯಬೇಕು ಎಂದು ಹೇಳಿದರು.

ಲಾಕ್‌ಡೌನ್‌ನ ಮೊದಲ ಹಂತದಲ್ಲಿ ಸುಮಾರು 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಜಿಡಿಪಿಯ ಮೂರನೇ ಒಂದು ಭಾಗದಷ್ಟು ಇರುವ ಎಂಎಸ್‌ಎಂಇ ವಲಯಕ್ಕೆ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸಿಗರು ಮತ್ತು ನಿರುದ್ಯೋಗಿಗಳಿಗೆ ಆಹಾರ ಮತ್ತು ಆರ್ಥಿಕ ಭದ್ರತೆ ಒದಗಿಸುವಂತೆ ಗಾಂಧಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಅವರು ಲಾಕ್ಡೌನ್ ಯಶಸ್ಸನ್ನು ಅಂತಿಮವಾಗಿ ಕೋವಿಡ್-19 ಅನ್ನು ನಿಭಾಯಿಸುವ ಭಾರತದ ಸಾಮರ್ಥ್ಯದ ಮೇಲೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಕೊರೋನಾ ವೈರಸ್ ವಿರುದ್ಧದ ದೇಶದ ಹೋರಾಟದ ಯಶಸ್ಸಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರ ಪ್ರಮುಖವಾಗಿದೆ ಎಂದು ಅವರು ಹೇಳಿದರು.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಲವಾರು ವಿಷಯಗಳ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ. ಕೋವಿಡ್-19 ವಿರುದ್ಧದ ಹೋರಾಟವು ಸಂಪನ್ಮೂಲಗಳ ಲಭ್ಯತೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಸಿಂಗ್ ಹೇಳಿದರು.

ರಾಜ್ಯಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದೆ ಬರದಿದ್ದರೆ, ಕೋವಿಡ್ 19 ವಿರುದ್ಧದ ಹೋರಾಟವು ದುರ್ಬಲಗೊಳ್ಳುತ್ತದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ರಾಜ್ಯಗಳಿಗೆ ದೊಡ್ಡ ಹಣಕಾಸಿನ ಪ್ಯಾಕೇಜ್ ನೀಡದಿದ್ದರೆ ಲಾಕ್ ಡೌನ್ ನಂತರ ರಾಜ್ಯಗಳಿಗೆ ಸಾಮಾನ್ಯ ಸ್ಥಿತಿಗೆ ಮರಳಲು ಹೇಗೆ ಸಾಧ್ಯವಾಗುತ್ತದೆ ಎಂದು ಅವರು ಕೇಳಿದರು.