EBM News Kannada
Leading News Portal in Kannada

Lockdown Effect: ಕೋಲಾರದಲ್ಲಿ ಮೆಣಸಿನಕಾಯಿ ಬೆಳೆದ ರೈತ ಕಂಗಾಲು; ತೋಟದಲ್ಲೇ ಕೊಳೆಯುತ್ತಿವೆ ಬೆಳೆಗಳು

ಕೋಲಾರ(ಏ.15): ಮಹಾಮಾರಿ ಕೊರೋನಾ ಏಟಿಗೆ ದೇಶವೇ ಲಾಕ್‍ಡೌನ್ ಆಗಿದ್ದು, ಇತ್ತ ಅನ್ನದಾತರ ಗೋಳು ಹೇಳತೀರದಾಗಿದೆ. ಕೋಲಾರದಲ್ಲಿ ಬೇಡಿಕೆಯಿಲ್ಲದೆ ಲಕ್ಷ ಲಕ್ಷ ಬಂಡವಾಳ ಹಾಕಿ ಬೆಳೆದ ಕ್ಯಾಪ್ಸಿಕಂ ತರಕಾರಿಯನ್ನು ಯಾರೂ ಕೊಳ್ಳುವವರು ಇಲ್ಲದಂತಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮದ ದೇವರಾಜ್ ಹಾಗೂ ಯಶೋಧಮ್ಮ ದಂಪತಿಗಳು 2 ಎಕರೆ ಪ್ರದೇಶದಲ್ಲಿ ಇಲ್ಲಿಯವರೆಗೆ 6 ಲಕ್ಷ ಬಂಡವಾಳ ಹಾಕಿ ಸಮೃದ್ದಿಯಾಗಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದಾರೆ. ಕ್ಯಾಪ್ಸಿಕಂ ಈಗ ಕಟಾವಿಗೆ ಬಂದಿದ್ದು ಮಾರುಕಟ್ಟೆಯಲ್ಲಿ ಇರೋ ಕ್ಯಾಪ್ಸಿಕಂ ಸೇಲಾಗದೆ ವ್ಯಾಪಾರಿಗಳು ಯಾರು ಕೊಳ್ತಿಲ್ಲ, ಹೀಗಾಗಿ ಗಿಡದಲ್ಲೆ ಸುಮಾರು 10 ಟನ್‍ಗು ಹೆಚ್ಚು ತೂಕದ ಕ್ಯಾಪ್ಸಿಕಂ ಹಣ್ಣಾಗಿ ಕೊಳೆಯುತ್ತಿದೆ, ಹೀಗಾಗಿ ಗಿಡಗಳನ್ನ ರಕ್ಷಿಸಿಕೊಳ್ಳೋಕೆ ತಾವೇ ಬೆಳೆದ ಬೆಳೆಯನ್ನ ರೈತರು ಕ್ರೇಟ್‍ಗಳಲ್ಲಿ ತುಂಬಿಸಿ ಹೊರಗೆ ಬಿಸಾಡುವಂತಾಗಿದೆ.

ಈಗ ಮಾರುಕಟ್ಟೆಯಲ್ಲಿ ಒಂದು ಕೆಜಿ ಕ್ಯಾಪ್ಸಿಕಂ ತರಕಾರಿಗೆ 5 ರೂಪಾಯಿ ಸಿಗೋದೆ ಹೆಚ್ಚಾಗಿದ್ದು, ಒಂದು ಕಾಟನ್ ಬಾಕ್ಸ್ ನಲ್ಲಿ ತುಂಬಿಸಿ ಮಾರುಕಟ್ಟೆಗೆ ಸಾಗಿಸೋಕೆ ಕೂಲಿ, ಸಾರಿಗೆ ಸೇರಿ 120 ರೂಪಾಯಿ ಖರ್ಚು ಬರ್ತಿದೆ, ಹೀಗಾಗಿ ಕಾಯಿ ಕಿತ್ತು ನಷ್ಟದ ಪಾಲಾಗೋ ಬದಲು, ತೋಟದಲ್ಲಿ ಕ್ಯಾಪ್ಸಿಕಂ ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ರೈತಮಹಿಳೆ ಯಶೋಧಮ್ಮ ಸರ್ಕಾರ ತರಕಾರಿಗೆ ಸೂಕ್ತ ಬೇಡಿಕೆ ಕಲ್ಪಿಸಿ ಮಾರುಕಟ್ಟೆ ವ್ಯವಸ್ತೆ ಮಾಡಬೇಕು ಇಲ್ಲವಾದ್ರೆ ಪರಿಹಾರವಾದ ನೀಡಲಿ ಎಂದು ಮನವಿ ಮಾಡಿದ್ದಾರೆ, ಬಂಗಾರಪೇಟೆ ರೈತಮುಖಂಡರು ಸರ್ಕಾರ ಮಾರುಕಟ್ಟೆ ವ್ಯವಸ್ತೆಯನ್ನ ಕಲ್ಪಿಸಿ ರೈತರಿಗೆ ನೆರವಾಗಲಿ ಎಂದು ಆಗ್ರಹಿಸಿದ್ದಾರೆ.

ಕೊರೋನಾ ಲಾಕ್ ಡೌನ್ ಹಿನ್ನಲೆ ಕೋಲಾರದಲ್ಲಿ ಬಜ್ಜಿ ಮೆಣಸಿನಕಾಯಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು , ಮಾರುಕಟ್ಟೆಯಲ್ಲಿ ಬೇಡಿಕೆಯು ಇಲ್ಲದೆ, ಕೊಳ್ಳೋರೊ ಇಲ್ಲದೆ ರೈತರು ತೋಟದ ಕಡೆಯೆ ಮುಖಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಜ್ಜಿ ಮೆಣಸಿನಕಾಯಿ ಬೆಳೆದ ಕೈಯಿಂದಲೇ ಬೆಳೆಯನ್ನು ರೈತರೇ ಕಿತ್ತು ಬೆಳೆನಾಶ ಮಾಡುವಂತಾಗಿದೆ.

ಕೋಲಾರ ತಾಲೂಕಿನ ಮೈಲಾಂಡಹಳ್ಳಿ ಗ್ರಾಮದ ನಂಜೇಗೌಡ ಎನ್ನುವರು ತಮ್ಮ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಬಜ್ಜಿ ಮೆಣಸಿನಕಾಯಿಗೆ ಬೇಡಿಕೆ ಹಾಗೂ ಬೆಲೆ ಕುಸಿದ ಹಿನ್ನಲೆ 5 ಲಕ್ಷ ಬಂಡವಾಳ ಹಾಕಿದ್ದ ರೈತ ನಂಜೇಗೌಡ ಸಂಕಷ್ಟದಲ್ಲಿದ್ದಾರೆ. ಇದೀಗ ಬೆಲೆಯಿಲ್ಲದೆ ಕುಟುಂಬಸ್ಥರೊಂದಿಗೆ ಸೇರಿ ತೋಟದಲ್ಲಿನ ಗಿಡಗಳನ್ನೆ ಕಿತ್ತು ಬಿಸಾಡಿದ್ದಾರೆ. ರಾಜ್ಯಾದ್ಯಂತ ಲಾಕ್ ಡೌನ್ ಹಿನ್ನಲೆ ಎಲ್ಲಾ ಮದುವೆ ಕಾರ್ಯಕ್ರಮ, ಬಜ್ಜಿ ಮೆಣಸಿನಕಾಯಿ ಬೀದಿ ವ್ಯಾಪಾರ, ಅಂತರಾಜ್ಯ ಮಾರಾಟದಲ್ಲಿ ಏರುಪೇರಾಗಿದ್ದು ಇದರ ಹೊಡೆತ ಬಜ್ಜಿ ಮೆಣಸಿನಕಾಯಿ ಬೆಳೆದ ರೈತನಿಗೂ ತಟ್ಟಿದೆ.ಒಟ್ಟಿನಲ್ಲಿ ರಾಜ್ಯದಲ್ಲೇ ಅತಿಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಯಲ್ಲಿ ಕೋಲಾರ ಸಹ ಮುಂಚೂಣಿಯಲ್ಲಿದ್ದು, ಬೋರ್ ವೆಲ್ ನೀರು ಆಧರಿಸಿ ರೈತರು ಸಾಲಮಾಡಿ ಬೆಳೆ ಹಾಕಿದ್ದರು. ಈಗ ಬೇಡಿಕೆ ಕುಸಿತದಿಂದ ಯಾರು ಕೊಳ್ಳಲು ಮುಂದೆ ಬರುತ್ತಿಲ್ಲ. ಹಾಗಾಗಿ ತರಕಾರಿ ಬೆಳೆ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸಿಕೊಡಿ. ಇಲ್ಲವಾದರೆ ಬೆಂಬಲ ಬೆಲೆ‌ ಘೋಷಿಸಿ ಎಂದು ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ.