ಕೊರೋನಾ ಸಾವಿನ ಬೆನ್ನ ಹಿಂದೆ ಮತ್ತೆ ಮೂರು ಪಾಸಿಟಿವ್ – ಕಲಬುರ್ಗಿಯಲ್ಲಿ ಆತಂಕದ ಕಾರ್ಮೋಡ
ಕಲಬುರ್ಗಿ(ಏ.14): ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 16ಕ್ಕೇರಿದೆ. 10 ವರ್ಷದ ಬಾಲಕಿ, 35 ವರ್ಷದ ಮಹಿಳೆ ಹಾಗೂ 51 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಪೇಷಂಟ್ 177ರ ಸಂಪರ್ಕದಿಂದ 10 ವರ್ಷದ ಬಾಲಕಿ ಹಾಗೂ ಮಹಿಳೆಗೆ ಸೋಂಕು ತಗುಲಿದೆ. 55 ವರ್ಷದ ವ್ಯಕ್ತಿ(ಪೇಷಂಟ್ 177) ಕೊರೋನಾ ಸೋಂಕಿಗೆ ಗುರಿಯಾಗಿ ಸಾವನ್ನಪ್ಪಿದ್ದ. ಆತನ ಮನೆಯವರ ಥ್ರೋಟ್ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು.ಇದೀಗ ವರದಿ ಬಂದಿದ್ದು, ಮೃತನ ಮನೆಯ 10 ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ನಿನ್ನೆ ಮೃತಪಟ್ಟಿದ್ದ 55 ವರ್ಷದ ಬಟ್ಟೆ ವ್ಯಾಪಾರಿಯ(ಪೇಷಂಟ್ 205) ಸಂಪರ್ಕದಿಂದಾಗಿ ಆತನ 51 ವರ್ಷದ ಸಹೋದರನಿಗೆ ಸೋಂಕು ತಗುಲಿದೆ. ಸಂತ್ರಸವಾಡಿಯ ಜಿಡಿಎ ಲೇಔಟ್ ಹಾಗೂ ಮೊಮಿನಪುರ ಬಡಾವಣೆಗಳಲ್ಲಿ ಸೋಂಕಿತರ ಮನೆಗಳಿದೆ. ನಿನ್ನೆಯಷ್ಟೇ ಒಂದು ಸಾವು ಸಂಭವಿಸಿತ್ತು. ಅದರ ಬೆನ್ನಹಿಂದೆಯೇ ಮತ್ತೆ ಮೂರು ಪಾಸಿಟಿವ್ ಬಂದಿರುವುದು, ಜಿಲ್ಲೆಯ ಜನತೆಯಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ.
ಕೊರೋನಾಗೆ ಕಲಬುರ್ಗಿಯಲ್ಲಿ ನಿನ್ನೆ ಸಂಜೆ ಮತ್ತೊಂದು ಬಲಿಯಾಗಿತ್ತು. ಅದರೊಂದಿಗೆ ಮೃತರ ಸಂಖ್ಯೆ ಮೂರಕ್ಕೇರಿತ್ತು. 55 ವರ್ಷದ ವ್ಯಕ್ತಿ(ಪೇಷಂಟ್ 205) ಚಿಕಿತ್ಸೆ ಫಲಿಸದೆ ಇಎಸ್ಐ ಐಸೋಲೇಷನ್ ವಾರ್ಡ್ ನಲ್ಲಿ ಮೃತಪಟ್ಟಿದ್ದರು. ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದಾತನ ಸಂಪರ್ಕದಿಂದ ಈ ವ್ಯಕ್ತಿಗೆ ಕೊರೋನಾ ಸೋಂಕು ಬಂದಿತ್ತು. ಧಾರ್ಮಿಕ ಸಭೆಯಲ್ಲಿ ಭಾಗಿಯಾದಾತನಿಗೆ ನೆಗೆಟಿವ್ ಬಂದಿತ್ತು. ಆದರೆ ಈತನಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ಏಪ್ರಿಲ್ 9 ರಂದು ಈತನನ್ನು ಇ.ಎಸ್.ಐ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ವ್ಯಕ್ತಿ ಮೋಮಿನಪುರ ಬಡಾವಣೆ ನಿವಾಸಿಯಾಗಿದ್ದು, ಬಟ್ಟೆ ವ್ಯಾಪಾರದ ಮಳಿಗೆಯನ್ನು ಹೊಂದಿದ್ದ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಂಜೆ ನಿಧನ ಹೊಂದಿದ್ದ. ಇದೀಗ ಆತನ 51 ವರ್ಷದ ಸಹೋದರನಿಗೂ ಕೊರೋನಾ ಸೋಂಕಿರೋದು ದೃಢಪಟ್ಟಿದೆ. ಮೃತನ ಕುಟುಂಬವು ದೊಡ್ಡದಾಗಿದ್ದು, ಅವರೆಲ್ಲರ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ, ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮನೆಯವರೆಲ್ಲರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮೋಮಿನಪುರ ಬಡಾವಣೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.