ಕೋಲಾರದಲ್ಲಿ ಟೊಮೆಟೊ ಕೇಳೋರಿಲ್ಲ;ಮಾರಾಟವಾಗದೆ ಕೊಳೆಯುತ್ತಿವೆ ಸಾವಿರಾರು ಬಾಕ್ಸ್ ಹಣ್ಣುಗಳು
ಕೋಲಾರ(ಏ.12): ಮಹಾಮಾರಿ ಕೊರೋನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ದವಾಗಿದ್ದು ರೈತಾಪಿವಲಯ ಹಿಂದೆಂದೂ ಕಾಣದ ನಷ್ಟ ಅನುಭವಿಸಬೇಕಾಗಿ ಬಂದೊದಗಿದೆ. ರಾಜ್ಯದಲ್ಲಿ ಅತಿಹೆಚ್ಚು ಟೊಮೊಟೋ ಬೆಳೆಯುವ ಕೊಲಾರ ಜಿಲ್ಲೆಯಲ್ಲಿ ಮಾರುಕಟ್ಟೆಗೆ ಬರುವ ಟೊಮೊಟೋವನ್ನು ಕೊಳ್ಳಲು ಯಾರೂ ಸಹ ಮುಂದೆ ಬರುತ್ತಿಲ್ಲ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಆಂಧ್ರ, ತಮಿಳುನಾಡು ಭಾಗಕ್ಕೆ ಟೊಮೆಟೊ ರಫ್ತು ಮಾಡಲು ಮಾರುಕಟ್ಟೆ ತೆರೆಯಲಾಗಿದೆ. ಇಲ್ಲಿಯ ಟೊಮೆಟೊ ಕೊಳ್ಳಲು ಹೊರರಾಜ್ಯದ ದಳ್ಳಾಳಿಗಳು ಬಾರದೆ ಮಂಡಿ ಮಾಲೀಕರು ಕಂಗಾಲಾಗಿದ್ದಾರೆ. ಕಳೆದ 20 ದಿನಗಳಿಂದ ಮಾರುಕಟ್ಟೆಗೆ ಪ್ರತಿ ದಿನ 15 ಸಾವಿರ ಬಾಕ್ಸ್ಗಳಿಗೂ ಹೆಚ್ಚು ಟೊಮೆಟೊ ಬರುತ್ತಿವೆ. ಆದರೆ ಪ್ರತಿದಿನ 5 ಸಾವಿರ ಬಾಕ್ಸ್ ಟೊಮೆಟೊ ಮಾರಾಟವಾಗದೇ ಮಾರುಕಟ್ಟೆಯಲ್ಲಿಯೇ ಕೊಳೆತು ಗಬ್ಬು ನಾರುತ್ತಿವೆ.
ನೆರೆಯ ಆಂಧ್ರ, ತಮಿಳುನಾಡು ರಾಜ್ಯದಲ್ಲಿ ಟೊಮೆಟೊ ಜ್ಯೂಸ್ , ಸಾಸ್ ಫ್ಯಾಕ್ಟರಿಗಳು ಮುಚ್ಚಿದ್ದು, ಆ ಭಾಗದ ದಳ್ಳಾಳಿಗಳು ಕೊರೋನಾ ಲಾಕ್‍ಡೌನ್ ಹಿನ್ನಲೆ ಟೊಮೆಟೊ ಕೊಳ್ಳಲು ಮುಂದೆ ಬರುತ್ತಿಲ್ಲ. ಕೊರೋನಾ ಮಹಾಮಾರಿ ಆಗಮಿಸುವ ಮುನ್ನ ಬೆಳೆದಿದ್ದ ಸಾಂಪ್ರದಾಯಿಕ ಬೆಳೆ ಟೊಮೆಟೊ ಈಗ ಕಟಾವಿಗೆ ಬಂದಿದ್ದು, ಪ್ರತಿನಿತ್ಯ ರೈತ ಕಣ್ಣೀರು ಸುರಿಸುತ್ತಿದ್ದಾನೆ. ಈ ಕುರಿತು ಮಾತನಾಡಿರುವ ಮಂಡಿ ಮಾಲೀಕರು ಶೀಘ್ರ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಲಿ. ಇಲ್ಲವೇ ಸರ್ಕಾರವೇ ಟೊಮೆಟೊ ಕೊಂಡು ಬಡವರಿಗೆ ಉಚಿತವಾಗಿ ನೀಡಲಿ ಎಂದು
ವಡ್ಡಹಳ್ಳಿ ಟೊಮೆಟೊ ಮಾರುಕಟ್ಟೆಗೆ ಕಳೆದ ಮೂರು ದಿನಗಳಿಂದ ಟೊಮೆಟೊ ಆಗಮನವು ಹೆಚ್ಚಿದ್ದು ಶನಿವಾರ ಒಂದೇ ದಿನ 30 ಸಾವಿರ ಬಾಕ್ಸ್ ಬಂದಿದೆ, 15 ಕೆಜಿ ತೂಕದ ಒಂದು ಬಾಕ್ಸ್ಗೆ 40 ರೂಪಾಯಿ ಗರಿಷ್ಟ ಬೆಲೆಯಿದ್ದು, 20 ರೂ ಕನಿಷ್ಟ ಬೆಲೆಯಿದೆ, ರೈತ ತೋಟದಿಂದ ಮಾರುಕಟ್ಟೆಗೆ ಟೊಮೆಟೊ ಸಾಗಿಸಲು ಕನಿಷ್ಟ 15 ರೂಪಾಯಿ ಖರ್ಚಾಗುತ್ತದೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಒಂದೂವರೆ ಲಕ್ಷ ಹಣ ಬಂಡವಾಳ ಬೇಕಿದ್ದು ಈಗ 10 ಸಾವಿರ ರೂಪಾಯಿ ರೈತನ ಕೈ ಸೋರೋದು ಅನುಮಾನವಾಗಿದೆ.
ಮಾರುಕಟ್ಟೆಗೆ ಮುಳಬಾಗಿಲು ಸುತ್ತಮುತ್ತ ಗ್ರಾಮಗಳಿಂದ ಟೊಮೆಟೊ ತರುವ ರೈತರು ಸೂಕ್ತ ಬೆಲೆ ಸಿಗದೇ ಹೋದಲ್ಲಿ ಹಾಗೆಯೇ ಟೊಮೆಟೊ ಬಿಟ್ಟು ಹೋಗುತ್ತಿದ್ದಾರೆ. ಹೀಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಬಾಕ್ಸ್ ಟೊಮೆಟೊ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ಹಾಗೆಯೇ ಉಳಿದಿದೆ. ಈ ಕುರಿತು ಮಾತನಾಡಿರುವ ರೈತರು ಸರ್ಕಾರ ಪರಿಹಾರ ನೀಡಲಿ ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕೊರೋನಾ ಭೀತಿಯಿಂದ ದೇಶವೇ ಸ್ತಬ್ದವಾಗಿದ್ದು ಇತ್ತ ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಿಲ್ಲದೆ ಕಂಗಾಲಾಗಿದ್ದಾರೆ. ಚಿನ್ನದನಾಡು ಕೋಲಾರದಲ್ಲಿ ಟೊಮೆಟೊ ಬೆಳೆಯನ್ನೇ ರೈತರು ನಂಬಿದ್ದಾರೆ. ಇದೀಗ ಕೊರೋನಾ ಭೀತಿಯಿಂದ ಈ ಬೆಳೆ ನಂಬಿದ್ದ ರೈತರು ಬೀದಿಗೆ ಬಂದಂತಾಗಿದೆ ಇನ್ನಾದರೂ ಸರ್ಕಾರ ಟೊಮೆಟೊ ಬೆಳೆಗಾರರ ಸಂಕಷ್ಟಕ್ಕೆ ಧಾವಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.