EBM News Kannada
Leading News Portal in Kannada

ಕೊರೋನಾ ಭೀತಿಗೆ ಕೋಟೆ ನಾಡಿನ ರೈತರು ತಲ್ಲಣ: ಜಮೀನಿನಲ್ಲಿಯೇ ಕೊಳೆಯುತ್ತಿವೆ ಕುಂಬಳಕಾಯಿ

ಚಿತ್ರದುರ್ಗ(ಏ.10): ದೇಶದೆಲ್ಲೆಡೆ ಲಾಕ್ ಡೌನ್ ಆದ ಬಳಿಕ ಜನರಿಗೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಅದರಲ್ಲೂ ರೈತನಿಗೆ ಒಂದೆಡೆ ಕೊರೊನಾ ಭೀತಿಯಾದರೆ, ಮತ್ತೊಂದೆಡೆ ಜಮೀನಿನಲ್ಲಿ ಬೆವರು ಸುರಿಸಿ ದುಡಿದು ಬೆಳೆದ ಬೆಳೆಯನ್ನು ಮಾರಾಟ ಮಾಡೋಕೆ, ಮಾರುಕಟ್ಟೆ ಸಾಗಿಸಲು, ಆಗದೆ ರೈತರು ಕಷ್ಟದ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಷ್ಟೆ ಅಲ್ಲದೆ ಬೆಳೆದ ಬೆಳೆಗಳನ್ನ ಮಾರುಕಟ್ಟೆಗೆ ಸಾಗಿಸುವ ಮಾರ್ಗಗಳಲ್ಲಿ ರೈತರ ವಾಹಗಳನ್ನು ಪೊಲೀಸರು ತಡೆ ಹಾಕುತ್ತಿದ್ದಾರಂತೆ . ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರೋ ಚಿತ್ರದುರ್ಗ ಜಿಲ್ಲೆಯ ರೈತರು ದಶಕಗಳಿಂದಲೂ ಒಂದಿಲ್ಲೊಂದು ಸಂಕಷ್ಟವನ್ನ ಎದುರಿಸುತ್ತಿದ್ದಾರೆ.

ಉತ್ತಮ ಮಳೆ ಇಲ್ಲದೆ ಬೋರ್ವೆಲ್ ಆಶ್ರಯಿಸಿ ಹಲವು ಬೆಳೆ ಬೆಳೆಯೋ ರೈತರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಸಂಕಷ್ಟ ಎದುರಿಸಿದ್ದಾರೆ. ಆದರೆ ಈಗ ಪ್ರಪಂಚವನ್ನೇ ತಲ್ಲಣಗೊಳೊಸಿರುವ ಮಹಾಮಾರಿ ಕೊರೋನಾ ವೈರಸ್ ಬಿಸಿ ಜನರಿಗಷ್ಟೆ ಅಲ್ಲದೆ ರೈತರು ಬೆಳೆದ ಬೆಳೆಗಳಿಗೂ ತಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕತಮ್ಮೇನಹಳ್ಳಿ ರೈತ ವಿರೇಶ್ ತನ್ನ ಎರಡು ವರೆ ಎಕರೆ ಜಮೀನಿನಲ್ಲಿ ಸಿಹಿ ಕುಂಬಳ ಕಾಯಿ ಬೆಳೆದಿದ್ದಾರೆ. ಸತತ ಪರಿಶ್ರಮದಿಂದ ಉತ್ತಮ ಬೆಳೆ ಬೆಳೆದಿರುವ ವೀರೇಶ್ ಗೆ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಇವರು ಬೆಳೆದಿರುವ ಕುಂಬಳಕಾಯಿ ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಮಾರಾಟ ಮಾಡದೆ ಇದ್ದರಿಂದ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಈ ಬಗ್ಗೆ ಸಂಕಷ್ಟ ಎದುರಿಸುತ್ತಿರುವ ರೈತ ವೀರೇಶ್ ಅಳಲು ತೋಡಿಕೊಂಡಿದ್ದಾರೆ.

ಲಕ್ಷ ಲಕ್ಷ ಖರ್ಚು ಮಾಡಿ ಸಿಹಿ ಕುಂಬಳಕಾಯಿ ಬೆಳೆದಿರುವ ರೈತನಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗುತ್ತಿಲ್ಲ, ಈರುಳ್ಳಿ ಬೆಳೆಗೆ ಒಳ್ಳೆ ಬೆಲೆ ಸಿಗುತ್ತಿಲ್ಲ, ಬೇರೆಡೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡೋಣ ಅಂದ್ರೆ ಪೊಲೀಸರು ಲಾಟಿ ಬೀಸುತ್ತಾರೆ. ಹೀಗಾಗಿ ಬೆಳೆದ ಬೆಳೆಯಲ್ಲಾ ಜಮೀನಿನಲ್ಲೇ ಕೊಳೆಯುತ್ತಿದೆ. ಸರ್ಕಾರ ಮಾರುಕಟ್ಟೆಗೆ ಹೋಗಲು ಅನುಮತಿ ಕೊಟ್ಟಿದೆ ಎಂದು ಹೇಳುತ್ತಾರೆ.ಆದ್ರೆ ನಾವು ಮಾರುಕಟ್ಟೆಗೆ ಬೆಳೆದ ಬೆಳೆಗಳನ್ನ ಸಾಗಿಸುವಾಗ ಪೊಲೀಸರು ಬಿಡಬೇಕಲ್ಲ ಎಂದು ತಮಗಾಗುತ್ತಿರುವ ತೊಂದರೆಯನ್ನು ಬಿಚ್ಚಿಟ್ಟಿದ್ದಾರೆ‌. ಅಷ್ಟೆ ಅಲ್ಲದೆ ಇಷ್ಟೆಲ್ಲ ನಷ್ಟ ಅನುಭವಿಸುತ್ತಿರುವ ನಮ್ಮಂತ ರೈತರ ಸಮಸ್ಯೆಗೆ ಸರ್ಕಾರ ಹಾಗೂ ಜಿಲ್ಲೆ ಅಧಿಕಾರಿಗಳು ಸ್ಪಂದಿಸಬೇಕು. ಬೆಳೆಯ ನಷ್ಟ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.