EBM News Kannada
Leading News Portal in Kannada

ರಾಹುಲ್ ಗಾಂಧಿ ಭೇಟಿಯಾದ ಸಿಎಂ ಕುಮಾರಸ್ವಾಮಿ: ಹಲವು ವಿಚಾರಗಳ ಬಗ್ಗೆ ಚರ್ಚೆ

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ಸೋಮವಾರ ಮೂಲಗಳಿಂದ ತಿಳಿದುಬಂದಿದೆ.

ಕಳೆದ 3 ದಿನಗಳಿಂದ ಕುಮಾರಸ್ವಾಮಿಯವರ ದೆಹಲಿ ಪ್ರವಾಸದಲ್ಲಿದ್ದು, ಇಂದು ಬೆಳಿಗ್ಗೆ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿ, ರಾಹುಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಭೇಟಿ ವೇಳೆ ಜೆಡಿಎಸ್ ಮುಖಂಡ ಡ್ಯಾನಿಸ್ ಅಲಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.

ಭಾನುವಾರ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕುಮಾರಸ್ವಾಮಿಯವರು ಶನಿವಾರ ರಾಜಧಾನಿ ದೆಹಲಿಗೆ ತೆರಳಿದ್ದರು.

ರಾಹುಲ್ ಗಾಂಧಿ ಭೇಟಿ ಬಳಿಕ ಕುಮಾರಸ್ವಾಮಿಯವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಮೂಲಗಳ ಪ್ರಕಾರ ಇಂದು ಮಧ್ಯಾಹ್ನ 12.45ರ ಸುಮಾರಿಗೆ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಲಿರುವ ಕುಮಾರಸ್ವಾಮಿಯವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ಸಾರಿಗೆ ವಿಚಾರಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸಂಜೆ 4.30ರ ಸುಮಾರಿಗೆ ಪ್ರಧಾನಿ ಮೋದಿಯವರನ್ನು ಕುಮಾರಸ್ವಾಮಿಯವರು ಭೇಟಿ ಮಾಡಲಿದ್ದಾರೆಂದು ವರದಿಗಳು ತಿಳಿಸಿವೆ.