EBM News Kannada
Leading News Portal in Kannada

ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ

ನವದೆಹಲಿ; ಶಾಂತಿಯು ರಂಜಾನ್ ಆಚರಿಸುವ ಹಿನ್ನಲೆಯಲ್ಲಿ ಎರಡು ದಶಕಗಳಿಂದೀಚೆಗೆ ಮೊಟ್ಟ ಮೊದಲ ಬಾರಿಗೆ ರಂಜಾನ್ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯ ಕದನವಿರಾಮ ಘೋಷಣೆ ಮಾಡಿತ್ತು. ಇದೀಗ ಅಮರನಾಥ ಯಾತ್ರೆ ವೇಳೆಯಲ್ಲಿಯೂ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದ್ದು, ಈ ನಿರ್ಧಾರಕ್ಕೆ ಭದ್ರತಾ ಸಂಸ್ಥೆಗಳು ತೀವ್ರ ವಿರೋಧಗಳನ್ನು ವ್ಯಕ್ತಪಡಿಸುತ್ತಿವೆ ಎಂದು ತಿಳಿದುಬಂದಿದೆ.

ಭಾರತ ಘೋಷಣೆ ಮಾಡಿದ್ದ ಏಕಪಕ್ಷೀಯ ಕದನ ವಿರಾಮಕ್ಕೆ ಈ ಹಿಂದೆ ಪಾಕಿಸ್ತಾನ ಕೂಡ ಒಪ್ಪಿಗೆ ನೀಡಿತ್ತು. ಆದರೆ, ಪಾಕ್ ಪೋಷಿತ ಭಯೋತ್ಪಾದಕರಿಗೆ ಇದು ಭಯೋತ್ಪಾದನೆಯ ಸುಗ್ಗಿ ಕಾಲದಂತಾಗಿ ಮಾರ್ಪಟ್ಟಿದೆ. ರಂಜಾನ್ ಕದನ ವಿರಾಮ ಘೋಷಣೆಯ ನಂತರ ಕಾಶ್ಮೀರಿ ಕಣಿವೆಯಲ್ಲಿ ಅತಿ ಹೆಚ್ಚು ಹಿಂಸಾಚಾರ ನಡೆದಿದ್ದು, ಮೊನ್ನೆಯಷ್ಟೇ ಪತ್ರಿಕಾ ಸಂಪಾದಕರೊಬ್ಬರನ್ನು ಹಾಗೂ ಸೇನಾಧಿಕಾರಿಯೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಭದ್ರತಾ ಸಂಸ್ಥೆಗಳು ಕದನ ವಿರಾಮ ಮುಂದುವರೆಸುವ ಕೇಂದ್ರ ಸರ್ಕಾರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಕಾಶ್ಮೀರ ಪರಿಸ್ಥಿತಿ ಕುರಿತಂತೆ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ.

ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಕದನ ವಿರಾಮ ಕುರಿತಂತೆ ಭಾನುವಾರ ಮಾತುಕತೆ ನಡೆಸುತ್ತೇನೆ. ದೇಶದನ ಜನತೆ ಮೊದಲು ಸಂತಸದಿಂದ ರಂಜಾನ್ ಹಬ್ಬವನ್ನು ಆಚರಿಸಲಿ ಎಂದು ಹೇಳಿದ್ದಾರೆ.
ರಂಜಾನ್ ಹಬ್ಬ ಹಿನ್ನಲೆಯಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದ ಸರ್ಕಾರ ಅಮರನಾಥ ಯಾತ್ರೆ ವೇಳೆಯಲ್ಲಿಯೂ ಇದನ್ನು ಮುಂದುವರೆಸುವ ಚಿಂತನೆಗಳನ್ನು ನಡೆಸಿದೆ. ಆದರೆ, ಪತ್ರಕರ್ತನ ಹತ್ಯೆ ಪ್ರಕರಣದ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.

ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಜನವರಿ 1, 1949ರಲ್ಲಿ ಮೊದಲ ಕದನ ವಿರಾಮ ಒಪ್ಪಂದದ ಮೇರೆಗೆ 1947ರ ಇಂಡೋ-ಪಾಕ್ ಕದನ ಮುಕ್ತಾಯವಾಗಿತ್ತು.

ಎರಡು ನೂತನ ಸ್ವತಂತ್ರ ರಾಷ್ಟ್ರಗಳ ನಡುವೆ ಕಾಶ್ಮೀರದ ಮೇಲಿನ ಪ್ರಭುತ್ವಕ್ಕಾಗಿ ಅಕ್ಟೋಬರ್ 1947ರಲ್ಲಿ ಯುದ್ಧ ಪ್ರಾರಂಭವಾಗಿತ್ತು. ಯುದ್ಧ ಕೇವಲ ಕಾಶ್ಮೀರಕ್ಕೆ ಸೀಮಿತವಾಗಿದ್ದರೂ ಅನಂತರದಲ್ಲಿ ಅಂತರಾಷ್ಟ್ರೀಯ ಮಧ್ಯಸ್ಥಿಕೆಯ ಮಟ್ಟಕ್ಕೆ ಬೆಳೆಯಿತು.

ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಸ್ಥಿಕೆಯನ್ನು ಬಯಸಿತ್ತು. ಬಳಿಕ ವಿಶ್ವಸಂಸ್ಥೆಯು ಸಮಿತಿಯೊಂದರನ್ನು ರೂಪಿಸಿತ್ತು. ಅನಂತರವೂ ಯುದ್ಧ ಕೆಲಕಾಲ ಮುಂದುವರೆದಿತ್ತು. ಅಂತಿಮವಾಗಿ 1948ರ ಡಿಸೆಂಬರ್’ನಲ್ಲಿ ಕದನ ವಿರಾಮ ಒಪ್ಪಂದವೇರ್ಪಟ್ಟಿತ್ತು. ಅದು 1949ರಲ್ಲಿ ಜಾರಿಗೆ ಬಂದಿತ್ತು. ಕದನ ವಿರಾಮ ಮೇಲ್ವಿಚಾರಣೆಗೆ ಭದ್ರತಾ ಮಂಡಳಿ ಭಾರತ-ಪಾಕಿಸ್ತಾನ ಮಿಲಿಟರಿ ಅಬ್ಸರ್ ವರ್ ಗ್ರೂಪ್ ರಚಿಸಿತ್ತು.