ಬಂಜೆಯಾದರೂ ಸರಿ, ಸಂಸ್ಕಾರವಿಲ್ಲದ ಮಕ್ಕಳನ್ನು ಮಾತ್ರ ಹೆರಬೇಡಿ; ಬಿಜೆಪಿ ಶಾಸಕ
ಭೋಪಾಲ್; ಬಂಜೆಯಾಗಿದ್ದರೂ ಪರವಾಗಿಲ್ಲ, ಸಂಸ್ಕಾರವಿಲ್ಲದ ಮಕ್ಕಳಿಗೆ ಮಾತ್ರ ಜನ್ಮ ನೀಡಬೇಡಿ ಎಂದು ಹೇಳುವ ಮೂಲಕ ಬಿಜೆಪಿ ಶಾಸಕರೊಬ್ಬರು ಸುದ್ದಿಗೆ ಗ್ರಾಸವಾಗಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿರುವ ಮಧ್ಯಪ್ರದೇಶದ ಗುನಾ ಕ್ಷೇತ್ರದ ಶಾಸಕ ಪನ್ನಾಲಾಲ್ ಶಾಕ್ಯಾ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಸಂಸ್ಕಾರ ಇಲ್ಲದ ಸಮಾಜ ದ್ರೋಹಿಗಳನ್ನು ಹೆರುವ ಬದಲು, ಬಂಜೆಯಾಗಿ ಉಳಿಯುವುದು ಒಳಿತಲ್ಲವೇ ಎಂದು ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ಗರೀಬಿ ಹಠಾವೋ ಎಂಬ ಘೋಷಣಾ ವಾಕ್ಯದೊಂದಿಗೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ಬಡವರನ್ನೇ ಓಡಿಸಿ ಬಿಟ್ಟಿತು. ಕೆಲ ಮಹಿಳೆಯರು ಇಂತಹ ನಾಯಕರಿಗೆ ಜನ್ಮ ನೀಡಿದ್ದಾರೆಂದು ಕಿಡಿಕಾರಿದ್ದಾರೆ.
ಬಿಜೆಪಿ ಶಾಸಕ ಶಾಕ್ಯಾ ಅವರು ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆ ಕೂಡ ಹೇಳಿಕೆಯೊಂದನ್ನು ನೀಡಿ ಸುದ್ದಿಗೆ ಗ್ರಾಸವಾಗಿದ್ದರು.
ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ವಿದೇಶಿ ನೆಲದಲ್ಲಿ ವಿವಾಹವಾಗಿದ್ದಕ್ಕೆ ಶಾಕ್ಯಾ ಅವರು ಬಹಿರಂಗವಾಗಿಯೇ ಆಕ್ರೋಶವನ್ನು ಹೊರಹಾಕಿದ್ದರು.