EBM News Kannada
Leading News Portal in Kannada

‘ಉಗ್ರ ನಿಗ್ರಹ’: ಯೋಧನ ಸಾವಿನ ಬೆನ್ನಲ್ಲೇ ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಕಣೆವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದು, ಇದರ ಬೆನ್ನಲ್ಲೇ ನಡೆದ ಕಾರ್ಯಾಚರಣೆಯಲ್ಲಿ ಸೈನಿಕರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಪನಾರ್ ಅರಣ್ಯ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗಳ ಕುರಿತು ಮಾಹಿತಿ ಪಡೆದ ಸೈನಿಕರು ಕೂಡಲೇ ಅರಣ್ಯವನ್ನು ಸುತ್ತುವರೆದು ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದರು. ಸೈನಿಕರು ಸುತ್ತುವರೆದ ವಿಚಾರ ತಿಳಿಯುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಈ ವೇಳೆ ಓರ್ವ ಯೋಧನಿಗೆ ಗುಂಡೇಟು ತಗುಲಿ ಆತ ಹುತಾತ್ಮನಾಗಿದ್ದಾನೆ.

ಬಳಿಕ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ದಾಳಿ ತೀವ್ರಗೊಂಡಿದ್ದು, ಯೋಧರಿಂದ ನಡೆದ ತೀವ್ರ ಪ್ರತಿದಾಳಿ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ. ಘಟನಾ ಸ್ಥಳದಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಶಂಕೆ ಇದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ ಸಮೀಪದ ಗ್ರಾಮಗಳಿಗೂ ಮುನ್ನೆಚ್ಚರಿಕೆ ರವಾನಿಸಲಾಗಿದ್ದು, ಗಡಿ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.