ಮೋದಿ ಸರ್ಕಾರ ವಂಶಾಡಳಿತ ಕೊನೆಗೊಳಿಸಿ, ಅಭಿವೃದ್ಧಿಯ ಆಡಳಿತ ನೀಡಿದೆ: ಅಮಿತ್ ಶಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಓಲೈಕೆ ರಾಜಕಾರಣ ಮತ್ತು ವಂಶಾಡಳಿತಕ್ಕೆ ಅಂತ್ಯ ಹಾಡಿ ಅಭಿವೃದ್ಧಿಯ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಒಂದೇ ಒಂದು ಹಗರಣ ಕೂಡ ನಡೆದಿಲ್ಲ. ಇದು ಮೋದಿ ಅವರ ಪಾರದರ್ಶಕ ಮತ್ತು ದೂರದೃಷ್ಟಿಯ ಆಡಳಿತದ ಸಂಕೇತ ಎಂದು ಬಿಜೆಪಿ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮೋದಿ ಸರ್ಕಾರದ ಸಾಧನೆಗಳ ಪಟ್ಟಿ ನೀಡಿದ ಅಮಿತ್ ಶಾ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಅದನ್ನು ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದರು.
ಇದೇ ವೇಳೆ ದೇಶದ ಎದುರಾಳಿಗಳನ್ನು ಎದುರಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿ ಏನೆಂಬುದನ್ನು 2016ರ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ತೋರಿಸಿಕೊಟ್ಟಿದೆ ಎಂದು ಶಾ ಹೇಳಿದರು.
ಸುದೀರ್ಘ ಅವಧಿಯಿಂದ ನನೆಗುದಿಗೆ ಬಿದ್ದಿದ್ದ ‘ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ)’ ಯೋಜನೆಯನ್ನು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎನ್‌ಡಿಎ ಸರ್ಕಾರ ಅನುಷ್ಠಾನಗೊಳಿಸಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕಲು ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿರುವುದೂ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.