ಸೋಮವಾರದಿಂದ ದ್ವಿಚಕ್ರಕ್ಕೆ ವಿನಾಯ್ತಿ, ಐಟಿ, ಬಿಟಿಗೆ ಶೇ.33 ಅನುಮತಿ, ಮೇ 3ರವರೆಗೆ ಮದ್ಯ ಮಾರಾಟ ಇಲ್ಲ; ಸಿಎಂ ಬಿಎಸ್ವೈ
ಬೆಂಗಳೂರು: ಏಪ್ರಿಲ್ 20ರ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸರಕು ಸಾಗಾಟ ವಾಹನಗಳ ಓಡಾಟಕ್ಕೆ ಅವಕಾಶ ಇರುತ್ತೆ, ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಕೋವಿಡ್ 19 ನಿರ್ವಹಣೆ ಕುರಿತಂತೆ ಇಂದು ಸಿಎಂ ಬಿಎಸ್ವೈ ಅವರು ಹಿರಿಯ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಏಪ್ರಿಲ್ 20ರ ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಲಾಕ್ ಡೌನ್ ಉಲ್ಲಂಘನೆಯ ದೂರುಗಳು ಹೆಚ್ಚುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈ ವೇಳೆ ಸಿಎಂ ಸೂಚನೆ ನೀಡಿದರು.
ಸಭೆ ಬಳಿಕ ಮಾತನಾಡಿದ ಸಿಎಂ ಬಿಎಸ್ವೈ, ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪಾಸ್ ಇಲ್ಲದೆ ದ್ವಿಚಕ್ರ ವಾಹನಗಳು ಓಡಾಡಬಹುದು. ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಉಗುಳುವುದನ್ನು ನಿಷೇಧಿಸಲಾಗಿದೆ. ಮೇ 03ರ ವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರೆಸಲಾಗುವುದು ಎಂದು ಸಿಎಂ ಹೇಳಿದರು.
ಕೋವಿಡ್ ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸುವುದು ಹಾಗೂ ಇತರ ಪ್ರದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಂಟೇನ್ಮೆಂಟ್ ಝೋನ್ ನಲ್ಲಿ ಇನ್ಸಿಡೆಂಟ್ ಕಮಾಂಡರ್ ನೇಮಕ ಮಾಡಿ ಅವರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಲಾಗುವುದು. ಜೊತೆಗೆ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಯ ತಂಡ ರಚಿಸಲಾಗುವುದು. ಅವರು ಕಂಟೇನ್ಮೆಂಟ್ ಝೋನ್ ಗಳ ಮೇಲ್ಚಿಚಾರಣೆ ವಹಿಸಲಿದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಕಟ್ಟುನಿಟ್ಟು ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಯಾರು ಮನೆಯಿಂದ ಹೊರಬರುವಂತಿಲ್ಲ. ಮನೆಗೆ ನಾವು ಆಹಾರ ವ್ಯವಸ್ಥೆ ಮಾಡುತ್ತೇವೆ. ಇಲ್ಲಿಯವರೆಗೆ ಪಾಸ್ ಕೊಟ್ಟಿರೋದು ಮೇ 3ರವರೆಗೆ ಅನುಮತಿ ಮುಂದೂಡಲಾಗಿದೆ. ಯಾವುದೇ ಕಾರಣಕ್ಕೂ ಹೊಸ ಪಾಸ ವಿತರಣೆ ಇಲ್ಲ. ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೆ ತೊಂದರೆ ಇಲ್ಲ. 20ರ ನಂತರ ಐಟಿ ಬಿಟಿ ಕೆಲಸಕ್ಕೆ ಶೇ. 33ರಷ್ಟು ಉದ್ಯೋಗಿ ಕೆಲಸಕ್ಕೆ ಅನುಮತಿ ನೀಡಲಾಗಿದೆ. ಅಂತರ ಜಿಲ್ಲಾ ಓಡಾಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ, ಓಡಾಟದ ವೇಳೆ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಡ್ಡಾಯ. ಎಂಟು ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನಲ್ಲಿ 32 ಸ್ಥಳಗಳನ್ನು ಕಂಟೋನಮೆಂಟ್ ಸ್ಥಳ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.