EBM News Kannada
Leading News Portal in Kannada

ಕೊರೋನಾ ಟೆಸ್ಟ್​ಗಾಗಿ ರಾಜ್ಯದಲ್ಲಿ 16 ಲ್ಯಾಬ್​ಗಳಿಗೆ ಅನುಮತಿ ನೀಡಿದ ಐಸಿಎಂಆರ್​

ಬೆಂಗಳೂರು(ಏ.17): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ ಹೊಸದಾಗಿ 38 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೂ ದಾಖಲಾದ ಪ್ರಕರಣಗಳ ಪೈಕಿ ಇದೇ ಹೆಚ್ಚಿನ ಸಂಖ್ಯೆಯಾಗಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ವೈದ್ಯಕೀಯ ಲಭ್ಯತೆಯೂ ವ್ಯಾಪಕವಾಗಿ ಬೇಕಾಗುತ್ತದೆ. ಹೀಗಾಗಿ ಐಸಿಎಂಆರ್​ ರಾಜ್ಯದಲ್ಲಿ 16 ಕೊರೋನಾ ಲ್ಯಾಬ್​ಗಳಿಗೆ ಅನುಮತಿ ನೀಡಿದೆ.

ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಹೆಚ್ಚು ಲ್ಯಾಬ್​ಗಳ ಅವಶ್ಯಕತೆ ಇದೆ. ಹೀಗಾಗಿ 11 ಸರ್ಕಾರಿ ಕೊರೋನಾ ಲ್ಯಾಬ್ ಹಾಗೂ 5 ಖಾಸಗಿ ಲ್ಯಾಬ್​ಗಳಿಗೆ ಅನುಮತಿ ನೀಡಲಾಗಿದೆ. ಖಾಸಗಿ ಲ್ಯಾಬ್​ಗಳಲ್ಲಿ ಕೊರೋನಾ ಪರೀಕ್ಷೆ ಮಾಡಲು ಐಸಿಎಂಆರ್​ ದರ ನಿಗದಿ ಮಾಡಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಟೆಸ್ಟಿಂಗ್‌ಗೆ 2250 ರೂಗಳನ್ನು ಮಾತ್ರ ಪಡೆಯಬೇಕು ಎಂದು ಹೇಳಿದೆ.

ಸರ್ಕಾರಿ ಲ್ಯಾಬ್‌ಗಳ ಎಲ್ಲಾ ಪ್ರೋಟೋಕಾ‌ಲ್‌ಗಳನ್ನು ಖಾಸಗಿ ಲ್ಯಾಬ್‌ಗಳು ಕೂಡಾ ಪಾಲಿಸಬೇಕು. ಸರ್ಕಾರದಿಂದ ಯಾವುದೇ ಟೆಸ್ಟಿಂಗ್ ಕಿಟ್‌ಗಳನ್ನು ನೀಡುವುದಿಲ್ಲ ಎಂದು ಖಾಸಗಿ ಲ್ಯಾಬ್‌ಗಳಿಗೆ ನಿರ್ಬಂಧ ವಿಧಿಸಿ ಅನುಮತಿ ನೀಡಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಎರಡು ಖಾಸಗಿ ಲ್ಯಾಬ್​ಗಳಿಗೆ ಐಸಿಎಂಆರ್ ಅನುಮತಿ ನೀಡಿತ್ತು. ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ, ಈಗ ಮತ್ತಷ್ಟು ಪರೀಕ್ಷಾ ಲ್ಯಾಬ್​ಗಳಿಗೆ ಅನುಮತಿ ಕೊಟ್ಟಿದೆ.