ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ
ಲಾಸ್ ಏಂಜಲೀಸ್, ಮಾರ್ಚ್ 19: ಕೊರೊನಾ ವೈರಸ್ ಮಾನವ ನಿರ್ಮಿತವೇ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಕೊರೊನಾ ವೈರಾಣುವನ್ನು ಕೃತಕವಾಗಿ ಸೃಷ್ಟಿಸಿ ಹರಡಿಸಲಾಗಿದೆ. ಅದರ ಮೂಲ ಚೀನಾ ವುಹಾನ್ ಪ್ರಯೋಗಾಲಯ ಎಂಬ ವಾದಗಳು ಹಾಗೂ ವದಂತಿಗಳನ್ನು ಅಮೆರಿಕ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳ ತಂಡವು ತಳ್ಳಿ ಹಾಕಿದೆ. ಜೊತೆಗೆ ಇದು ನೈಸರ್ಗಿಕವಾಗಿ ಹುಟ್ಟಿದ ವೈರಾಣು ಎಂದು ತಂಡ ಸ್ಪಷ್ಟಪಡಿಸಿದೆ. ವಿಜ್ಞಾನಿಗಳು ಕಂಡುಕೊಂಡಿದ್ದು ಹೇಗೆ?, ವಿಜ್ಞಾನಿಗಳು ನೀಡಿದ ವರದಿ ಏನು ಹೇಳುತ್ತೆ, ಮನುಷ್ಯನಿಗೆ ಈ ವೈರಸ್ ಬಂದಿದ್ದು ಹೇಗೆ ಎಲ್ಲ ಪ್ರಶ್ನೆಗೂ ಉತ್ತರ ಇಲ್ಲಿದೆ.
ವೈರಾಣು ಮೂಲದ ಕುರಿತು ಸಂಶೋಧನೆ ನಡೆಸಿದ್ದ ಅಮೆರಿಕದ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ಸಂಶೋಧಕರು ಸೇರಿದಂತೆ ಅನೇಕ ವಿಜ್ಞಾನಿಗಳು ವರದಿಯೊಂದನ್ನು ಮಂಡಿಸಿದ್ದು, ಅದು ನೇಚರ್ ಮೆಡಿಸಿನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ. ಕೊರೊನಾ ವೈರಸ್ ಪ್ರಸಕ್ತ ಸ್ಥಿತಿಯಲ್ಲೇ ನೈಸರ್ಗಿಕವಾಗಿ ಹುಟ್ಟಿಕೊಂಡಿದ್ದು, ಬಳಿಕ ಜೀವಿಯೊಂದಕ್ಕೆ ಪ್ರವೇಶವಾಗಿದ್ದು, ಅಲ್ಲಿಂದ ಮಾನವರ ದೇಹ ಪ್ರವೇಶಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವರದಿಯಲ್ಲಿ ಕೊರೊನಾ ವೈರಸ್ ಕೃತಕವಾಗಿ ಸೃಷ್ಟಿಸಿದ್ದಲ್ಲ , ನೈಸರ್ಗಿಕವಾಗಿ ಹುಟ್ಟಿದ್ದು ಎಂದು ಖಚಿತಪಡಿಸಲಾಗಿದೆ. ವೈರಾಣುವಿನ ಅನುವಂಶಿಕ ಧಾತುಗಳ ರಚನೆಯನ್ನು ಪರಿಶೀಲಿಸಿದಾಗ ಇದು ಮಾನವ ನಿರ್ಮಿತ ವೈರಾಣುವಲ್ಲ. ನೈಸರ್ಗಿಕ ವೈರಾಣು ಎಂಬುದನ್ನು ಕಂಡುಕೊಳ್ಳಲಾಯಿತು ಎಂದು ಸ್ಕ್ರಿಪ್ಸ್ ಸಂಸ್ಥೆಯ ಸಂಶೋಧಕ ಮತ್ತು ಅಧ್ಯಯನ ವರದಿಯ ಸಹ ಲೇಖಕ ಕ್ರಿಸ್ಟೀನ್ ಆಂಡರ್‌ಸನ್ ತಿಳಿಸಿದ್ದಾರೆ.
ಕೊರೊನಾ ವೈರಸ್‌ನ ಅಂಗವಾದ ಸ್ಪೈಕ್ ಪ್ರೊಟಿನ್ ಅನ್ನು ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಈ ಅಂಶಗಳು ಮಾನವನ ಜೀವಕೋಶಗಳನ್ನು ಎಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ ಎಂಬುದನ್ನು ಅವರು ಪರಿಶೀಲನೆಗೆ ಒಳಪಡಿಸಿದ್ದಾರೆ. ಮಾನವ ನಿರ್ಮಿತವಾದರೆ ಇಷ್ಟು ಗಟ್ಟಿಯಾಗಿಹಿಡಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರಿಗೆ ಖಚಿತಪಟ್ಟಿತ್ತು. ಹೀಗಾಗಿ ಇದು ನಿಸರ್ಗದತ್ತ ವೈರಾಣು ಎಂದು ದೃಢಪಡಿಸಿದ್ದಾರೆ.