EBM News Kannada
Leading News Portal in Kannada

ರೈತರ ಸಾಲ ಮನ್ನಾವನ್ನು ಬಜೆಟ್ ನಲ್ಲಿ ಘೋಷಣೆ ಮಾಡದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ: ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ನೂತನ ಬಜೆಟ್ ನಲ್ಲಿ ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರಾಜ್ಯದ ರೈತರ ಸಾಲಮನ್ನಾ ಮಾಡುವುದಾಗಿ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ತಂದೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ರೈತರ ಸಾಲಮನ್ನಾ ಮಾಡಬೇಕೆಂದರೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ ಸಿಗಬೇಕು ಎಂಬ ಹೊಸ ವರಸೆ ಆರಂಭಿಸಿದ್ದಾರೆ. ಈ ಮೂಲಕ ರೈತರಿಗೆ ದ್ರೋಹ ಬಗೆಯಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಹಾಗಾದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದರೆ ಮಾತ್ರ ತಾವು ಮುಖ್ಯಮಂತ್ರಿಯಾಗುವುದು ಎಂದು ಕುಮಾರಸ್ವಾಮಿಯವರು ಷರತ್ತು ವಿಧಿಸಬೇಕಾಗಿತ್ತು. ಆದರೆ ಅವರು ಮುಖ್ಯಮಂತ್ರಿಯಾಗುವುದಕ್ಕೆ ಅವಸರ ಮಾಡಿದರು. ಅಧಿಕಾರಕ್ಕೆ ಬಂದ ಮೇಲೆ ಇದೀಗ ರೈತರ ಸಾಲಮನ್ನಾ ಮಾಡಲು ಹಿಂದುಮಂದು ನೋಡುತ್ತಿದ್ದಾರೆ ಎಂದರು.

ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ಶೇಕಡಾ 50 ಭಾಗ ನೀಡಲಿ ಎಂದು ಕುಮಾರಸ್ವಾಮಿಯವರು ಕೇಳುತ್ತಿರುವುದು ಸರಿಯಲ್ಲ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕೇಂದ್ರ ಸರ್ಕಾರದ ನೆರವು ಇಲ್ಲದೆ ರೈತರ ಸಾಲ ಮನ್ನಾ ಮಾಡಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಕಳೆದ ತಿಂಗಳು ಮೇ 30ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಡೆಸಿದ್ದ ರೈತರ ಸಭೆಯಲ್ಲಿ 15 ದಿನಗಳೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಇಷ್ಟು ದಿನ ಕಳೆದ ನಂತರವೂ ಮಾಡಿಲ್ಲ. ಇನ್ನು ಮುಂದೆ ಬಜೆಟ್ ನಲ್ಲಿಯಾದರೂ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದ ಯಡಿಯೂರಪ್ಪನವರು, ಬಜೆಟ್ ಮಂಡನೆಗೆ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪ್ರಣಾಳಿಕೆಗಳನ್ನು ಓದಿಕೊಳ್ಳಲಿ ಎಂದು ಸಲಹೆ ನೀಡಿದರು.