EBM News Kannada
Leading News Portal in Kannada

Lockdown Effect: ಕೋಲಾರದಲ್ಲಿ ಕಳ್ಳಬಟ್ಟಿ ದಂಧೆ: ಅಬಕಾರಿ ಇಲಾಖೆಯಿಂದ ನಿರಂತರ ದಾಳಿ

ಕೋಲಾರ(ಏ.17): ಕೊರೋನಾ ಲಾಕ್ ಡೌನ್ ಪರಿಣಾಮ ದೇಶದಾದ್ಯಂತ ಎಲ್ಲಾ ಸರ್ಕಾರಿ ಸ್ವಾಮ್ಯದ ಕಾರ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದ್ದು, ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಲಾಗಿದೆ. ಕರ್ನಾಟಕ ರಾಜ್ಯದಲ್ಲೂ ಲಾಕ್ ಡೌನ್ ಮುಗಿಯುವವರೆಗೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದು ಅನುಮಾನವಾಗಿದೆ. ಈ ಬಗ್ಗೆ ಏಪ್ರಿಲ್ 20 ನಂತರ ಸಿಎಂ ಯಡಿಯೂರಪ್ಪ ಜೊತೆಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಕೋಲಾರದಲ್ಲಿ ಅಬಕಾರಿ ಸಚಿವ ಎಚ್ ನಾಗೇಶ್ ತಿಳಿಸಿದ್ದಾರೆ. ಆದರೆ ಲಾಕ್ ಡೌನ್ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೆ ಭದ್ರತೆ ಸಮಸ್ಯೆ ಜೊತೆಗೆ ಮದ್ಯಪಾನಿಗಳನ್ನ ತಡೆಯುವುದು ಕಷ್ಟಸಾಧ್ಯ.

ಹೀಗಾಗಿ ಮದ್ಯ ಮಾರಾಟ ಅಸಾಧ್ಯದ ಮಾತು. ಇನ್ನು ಮದ್ಯಕ್ಕಾಗಿ ಹಲವೆಡೆ ಕೋಲಾರದಲ್ಲಿ ಬಾರ್​ಗಳಿಗೆ ಕನ್ನ ಹಾಕಿರುವ ಕಳ್ಳರು ಬಾರ್ ಗಳಲ್ಲಿನ ಹಣವನ್ನು ಮುಟ್ಟದೆ ಕೇವಲ ಮದ್ಯದ ಬಾಟಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮತ್ತೊಂದೆಡೆ ಕೋಲಾರದಲ್ಲಿ ಸದ್ದಿಲ್ಲದೆ ಕಳ್ಳಬಟ್ಟಿ ದಂಧೆ ಆರಂಭವಾಗಿದ್ದು ಗಡಿಭಾಗದಲ್ಲಿ ಕಳ್ಳಬಟ್ಟಿ ತಯಾರಿಕೆ ಜೋರಾಗಿ ನಡೆಯುತ್ತಿದೆ. ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕಿನ ಗಡಿಗ್ರಾಮಗಳಲ್ಲಿ ಕಳ್ಳಬಟ್ಟಿ ಇಳಿಸುವ ಕಾರ್ಯ ನಡೆಯುತ್ತಿದೆ.

ಮದ್ಯ ಮಾರಾಟ ಸ್ಥಗಿತ ಹಿನ್ನಲೆ ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳಬಟ್ಟಿ ಇಳಿಸುವ ಕಾರ್ಯ ಆರಂಭಿಸಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ಅಬಕಾರಿ‌ ಇಲಾಖೆ ಒಂದೇ ವಾರದಲ್ಲಿ ಎರಡು ಕಡೆ ದಾಳಿ ನಡೆಸಿದ್ದು ಕಾಮಸಮುದ್ರ ಹೋಬಳಿಯ ಕದಿರಿನತ್ತ ಗ್ರಾಮದಲ್ಲಿ ಏಪ್ರಿಲ್ 13 ರಂದು ದಾಳಿ ನಡೆಸಿದ್ದು, ರವಣೊಜಿರಾವ್ ಎನ್ನುವರ ತೋಟದಲ್ಲಿ ಕಳ್ಳಬಟ್ಟಿ ಇಳಿಸುತ್ತಿದ್ದ. ಆರೋಪದಡಿ ಮುನ್ನೋಬಾಯಿ, ಬಾಬು ಎನ್ನುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 4 ಡ್ರಮ್ ಗಳಲ್ಲಿ ತುಂಬಿಸಿದ್ದ 180 ಲೀಟರ್ ಬೆಲ್ಲದ ಕೊಳೆ, 4 ಕೆಜಿ ಬಿಳಿಜಾಲಿ ಚಕ್ಕೆ, ಬೆಲ್ಲ ವಶಪಡಿಸಿಕೊಳ್ಳಲಾಗಿದೆ. ಬಂಗಾರಪೇಟೆ ತಾಲೂಕಿನ ನರಸಿಂಹಪುರ ಗ್ರಾಮದಲ್ಲಿ ಏಪ್ರಿಲ್ 16 ರಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೃಷ್ಣಪ್ಪ ಎನ್ನುವರಿಗೆ ಸೇರಿದ ತೋಟದಲ್ಲಿ ಕಳ್ಳಬಟ್ಟಿ ಇಳಿಸುವ ಕಾರ್ಯ ನಡೆದಿತ್ತು. ಸ್ಥಳದಲ್ಲಿ 50 ಲೀಟರ್ ಕೊಳೆ, ಬೆಲ್ಲ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ‌ ಸಚಿವ ಎಚ್ ನಾಗೇಶ್ ತವರು ಕ್ಷೇತ್ರ ಮುಳಬಾಗಿಲು ತಾಲೂಕಿನಲ್ಲೂ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆದಿದ್ದ ಒಬ್ಬರನ್ನ ಬಂಧಿಸಲಾಗಿದೆ.

ಆಂಧ್ರದಿಂದ ಕಳ್ಳಬಟ್ಟಿ ತಂದು ಮಾರಾಟ ಮಾಡುವ ಜಾಲ‌ ಪತ್ತೆ

ನೆರೆಯ ಆಂದ್ರದಲ್ಲೂ ಕಳ್ಳಬಟ್ಟಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಆಂಧ್ರಪ್ರದೇಶದಿಂದ ಕಳ್ಳಭಟ್ಟಿ ತಂದು ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ ಮಾಡಿ ಆರೋಪಿ ಬಂಧನ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚೊಕ್ಕರೆಡ್ಡಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸುನೀಲ್ ಎಂಬುವರನ್ನು ಬಂಧಿಸಿದ್ದು ಲೋಕೇಶ್, ಗಜೇಂದ್ರ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದ್ದು ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಗೆ ವಿಷೇಶ ತಂಡ ರಚನೆ ಮಾಡಲಾಗಿದೆ.ಆರೋಗ್ಯಕ್ಕೆ ಹಾನಿಕಾರಕ ಈ ಕಳ್ಳಬಟ್ಟಿ

ಮದ್ಯದಷ್ಟೆ ಅಮಲು ಈ ಕಳ್ಳಬಟ್ಟಿಗೂ ಇದ್ದು ಇಂದಿಗು ಕಳ್ಳಬಟ್ಟಿ ಸೇವಿಸೊರ ಸಂಖ್ಯೆಯೇನು‌ ಇಳಿಕೆಯಾಗಿಲ್ಲ. ಮದ್ಯ ಮಾರಾಟ ವೇಳೆ ಹಾಗೂ ಮಾರಾಟ ಬಂದ್ ಆದಾಗ ಜಾಲ ಪತ್ತೆಯಾಗಿರುವ ಘಟನೆಗಳಿವೆ. ಇನ್ನು ಕಳ್ಳಬಟ್ಟಿ ಇಳಿಸುವ ಧಂದೆಗೆ ಬಳಸುವ ವಸ್ತುಗಳು ಆರೋಗ್ಯಕ್ಕೆ ಮಾರಕವಾಗಿದ್ದು ವಸ್ತುಗಳನ್ನು ಕೊಳೆಯುವಂತೆ ಮಾಡಿ ನಂತರ ಬಟ್ಟಿ ಇಳಿಸಿ ಮಾರಾಟ ಮಾಡುವುದಾಗಿದೆ. ಹೊಸ ಬೆಲ್ಲ, ಹಳೆ ಬೆಲ್ಲ, ಚಕ್ಕೆ, ಕೊಳೆತ ಹಣ್ಣು ತರಕಾರಿ ಇಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗಿದ್ದು ಕಳ್ಳಬಟ್ಟಿ ಇಳಿಸುವುದು ಕಾನೂನು ಬಾಹಿರ ಚಟುವಟಿಕೆ ಆಗಿದೆ.

ಮದ್ಯ ಮಾರಾಟ ಬಂದ್, ಆದರು ಅಕ್ರಮವಾಗಿ ಎಣ್ಣೆ ಮಾರಾಟ ಆರೋಪ,
ಅಬಕಾರಿ ಸಚಿವ ಎಚ್ ನಾಗೇಶ್ ತವರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಆರೋಪಗಳಿವೆ. ನಿಗದಿತ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿಗೆ ಹಣ ನೀಡಿ ಮದ್ಯಪಾನಿಗಳು ಮದ್ಯ ಕೊಳ್ಳುವ ಮಾಹಿತಿಯೇನು ಗುಟ್ಟಾಗಿ ಉಳಿದಿಲ್ಲ. ಆದರೂ ಮದ್ಯ ಮಾರಾಟ ಇಲ್ಲದಿದ್ದರೂ ಹೇಗೆ ಎಣ್ಣೆ ಮಾರಾಟವಾಗುತ್ತಿದೆ ಎಂಬುದು ಇಂದಿಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳ್ಳಬಟ್ಟಿ ದಂಧೆ ಹುಡುಕಿ‌ ಮಟ್ಟ ಹಾಕುತ್ತಿರುವ ಅಬಕಾರಿ ಇಲಾಖೆ ಇತ್ತ ಅಕ್ರಮ ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಲಿ ಎಂಬ ಆಗ್ರಹ ವ್ಯಕ್ತವಾಗಿದೆ.

ಒಟ್ಟಿನಲ್ಲಿ ರಾಜ್ಯದಾದ್ಯಂತ ಲಾಕ್‌ ಡೌನ್ ಬಿಗಿ ಹಿನ್ನಲೆ ಈ ವೇಳೆ ಮದ್ಯ ಮಾರಾಟಕ್ಕೂ ಸರ್ಕಾರ ಬ್ರೇಕ್ ಹಾಕಿ ಉತ್ತಮ ನಿರ್ಧಾರ ಕೈಗೊಂಡಿದೆ. ಆದರೆ ಆರೋಗ್ಯಕ್ಕೆ ಹಾನಿಕಾರಕ ಕಳ್ಳಬಟ್ಟಿ ಕುಡಿದು ಆರೋಗ್ಯ ಏರು ಪೇರು ಮಾಡಿಕೊಳ್ಳಬೇಡಿ ಎಂದು ಅಬಕಾರಿ ಇಲಾಖೆ ಮದ್ಯಪಾನಿಗಳಿಗೆ ಸಲಹೆ ನೀಡಿದೆ.