EBM News Kannada
Leading News Portal in Kannada

ರಜೆಯಲ್ಲಿ ಚಂದ ಕೊಚ್ಚರ್, ಐಸಿಐಸಿಐ ಬ್ಯಾಂಕ್ ಸಿಒಒ ಆಗಿ ಸಂದೀಪ್ ಭಕ್ಷಿ ನೇಮಕ

ನವದೆಹಲಿ: ವಿಡಿಯೋಕಾನ್ ಸಂಸ್ಥೆ ಸಾಲ ಪ್ರಕರಣ ಸಂಬಂದ ವಿಚಾರಣೆ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಸಿಇಒ ಚಂದ ಕೊಚ್ಚರ್ ಅವರು ರಜೆಯಲ್ಲಿದ್ದು ಸಂಸ್ಥೆಯ ಆಡಳಿತ ನೋಡಿಕೊಳ್ಳುವ ಸಲುವಾಗಿ ಸಂದೀಪ್ ಭಕ್ಷಿ ಅವರನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಒಒ) ಆಗಿ ನೇಮಕ ಮಾಡಲಾಗಿದೆ.

ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಚಂದ ಕೊಚ್ಚರ್ ಅವರು ರಜೆಯಲ್ಲಿರುವುದರಿಂದ ಬ್ಯಾಂಕ್ ಆಡಳಿತ ನಿರ್ವಹಣೆಗಾಗಿ ಸಂದೀಪ್ ಭಕ್ಷಿ ಅವರನ್ನು ನೇಮಕ ಮಾಡಲಾಗಿದೆ.
ಸದ್ಯ ಭಕ್ಷಿ ಅವರು ಐಸಿಐಸಿಐ ನ ಪ್ರುಡೆನ್ಷಿಯಲ್ ಲೈಫ್ ಇನ್ಶುರೆನ್ಸ್ ನ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡುತ್ತಿದ್ದು ಅವರನ್ನೇ ಇದೀಗ ಬ್ಯಾಂಕ್ ನ ಸಿಒಒ ಆಗಿ ನೇಮಿಸಲಾಗಿದೆ.

2018ರ ಮೇ 30ರಂದು ಆಡಳಿತ ಮತ್ತು ಸಾಂಸ್ಥಿಕ ಮಾನದಂಡಗಳ ಅನ್ವಯ ವಿಚಾರಣೆ ಆರಂಭಗೊಂಡಿದ್ದು ಅಲ್ಲಿಂದ ಚಂದ ಕೊಚ್ಚರ್ ಅವರು ರಜೆ ತೆಗೆದುಕೊಂಡಿದ್ದಾರೆ.

ಬ್ಯಾಂಕಿನ ಎಲ್ಲಾ ವ್ಯವಹಾರಗಳು ಮತ್ತು ಸಾಂಸ್ಥಿಕ ಕೇಂದ್ರ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಭಕ್ಷಿ ಅವರಿಗೆ ನೀಡಲಾಗಿದ್ದು ಐಸಿಐಸಿಐ ಬ್ಯಾಂಕ್ ಮತ್ತು ಕಾರ್ಯನಿರ್ವಾಹಕ ನಿರ್ವಹಣೆ ಮಂಡಳಿಯಲ್ಲಿನ ಎಲ್ಲಾ ಕಾರ್ಯನಿರ್ವಾಹಕ ನಿರ್ದೇಶಕರು ಅವರಿಗೆ ವರದಿ ಮಾಡಬೇಕಿದೆ.

ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಸಮೂಹ ಕಂಪನಿಗೆ 2012ರಲ್ಲಿ 3,250 ಕೋಟಿ ರುಪಾಯಿ ಸಾಲ ನೀಡಿತ್ತು. ಆದರೆ ಸಾಲದ ಶೇ. 80ರಷ್ಟು ಹಣವೂ ಮರು ಪಾವತಿಯಾಗಿಲ್ಲ. ಈ ಸಂಬಂಧ ಚಂದ ಕೊಚ್ಚರ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ.