EBM News Kannada
Leading News Portal in Kannada

ಚೀನಾ ಸರಕುಗಳ ಮೇಲೆ 50 ಶತಕೋಟಿ ಡಾಲರ್‌ ಸುಂಕ ವಿಧಿಸಿದ ಅಮೆರಿಕ

ವಾಷಿಂಗ್ಟನ್‌/ಬೀಜಿಂಗ್‌: ಚೀನಾ ಸರಕುಗಳ ಮೇಲೆ 50 ಶತಕೋಟಿ ಡಾಲರ್‌ ಮೊತ್ತದ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅನುಮೋದನೆ ನೀಡಿದ್ದಾರೆ.

ಈ ಹೊಸ ಬೆಳವಣಿಗೆಯಿಂದ ವಿಶ್ವದ ಎರಡು ಬೃಹತ್‌ ಆರ್ಥಿಕತೆ ರಾಷ್ಟ್ರಗಳ ನಡುವೆ ವ್ಯಾಪಾರ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಚೀನಾದ ಸರಕುಗಳ ಮೇಲಿನ ಸುಂಕ, ಬೌದ್ಧಿಕ ಆಸ್ತಿಯ ಕಳ್ಳತನ ಎಂದು ವರ್ಗೀಕರಿಸುವ ಪ್ರತಿಕ್ರಿಯೆಗೆ ಅನುಗುಣವಾಗಿದೆ ಎಂದು ಅಮೆರಿಕ ಹೇಳಿದೆ.

ಈ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಟ್ರಂಪ್‌ ವಿವಿಧ ಇಲಾಖೆಗಳ ಸಚಿವರು ಹಾಗೂ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರಾಸ್‌, ಖಜಾನೆ ಕಾರ್ಯದರ್ಶಿ ಸ್ಟೀವನ್‌ ಮನ್ಚಿನ್‌ ಮತ್ತು ಅಮೆರಿಕ ವ್ಯಾಪಾರ ಪ್ರತಿನಿಧಿ ರಾಬರ್ಟ್‌ ಲೈಥೈಸರ್‌ ಅವರೊಂದಿಗೆ ಗುರುವಾರ 90 ನಿಮಿಷಗಳ ಸಮಾಲೋಚನೆ ನಡೆಸಿದ ನಂತರ ಚೀನಿ ಸರಕುಗಳ ಮೇಲೆ 50 ಶತಕೋಟಿ ಡಾಲರ್‌ ಸುಂಕ ವಿಧಿಸಲು ಟ್ರಂಪ್‌ ಸಮ್ಮತಿ ಸೂಚಿಸಿದರು.

ಅಮೆರಿಕದ ಈ ಕ್ರಮಕ್ಕೆ ಚೀನಾ ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌, ”ಅಮೆರಿಕ ತನ್ನ ಪರವಾಗಿ ಏಕಪಕ್ಷೀಯ ರಕ್ಷ ಣಾ ನೀತಿಯ ಕ್ರಮಗಳನ್ನು ಅಳವಡಿಸಿಕೊಂಡರೆ ಮತ್ತು ಚೀನಾದ ಹಿತಾಸಕ್ತಿಗಳನ್ನು ಹಾನಿಗೊಳಿಸಿದರೆ, ನಾವು ಕೂಡ ತಕ್ಷ ಣ ಪ್ರತಿಕ್ರಿಯಿಸುತ್ತೇವೆ ಹಾಗೂ ನಮ್ಮ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದೃಢವಾಗಿ ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದ್ದಾರೆ.

ಚೀನಾ ಸರಕುಗಳ ಮೇಲೆ 50 ಶತಕೋಟಿ ಡಾಲರ್‌ ಮೊತ್ತದ ಸುಂಕ ವಿಧಿಸಲಾಗುವುದು ಎಂದು ಕಳೆದ ಮಾರ್ಚ್‌ನಲ್ಲಿ ಟ್ರಂಪ್‌ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ತಾನು ಕೂಡ ಕಾರು, ವಿಮಾನ ಮತ್ತು ಸೊಯಾಬೀನ್‌ ರೀತಿಯ ಅಮೆರಿಕನ್‌ ಸರಕುಗಳ ಮೇಲೆ 50 ಶತಕೋಟಿ ಡಾಲರ್‌ ಪ್ರತಿಕಾರ ತೆರಿಗೆ ವಿಧಿಸುವುದಾಗಿ ಈ ಹಿಂದೆ ಚೀನಾ ಕೂಡ ಬೆದರಿಕೆ ಒಡ್ಡಿತ್ತು.