EBM News Kannada
Leading News Portal in Kannada

ಢಾಕಾ: ಭಾರತದ ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ರಂತಹ ಜಾತ್ಯಾತೀತ ವಾದಿಗಳ ಹತ್ಯೆ ಪ್ರಕರಣ ಸುದ್ದಿಗೆ ಗ್ರಾಸವಾಗಿರುವಂತೆಯೇ ಇಂತಹುದೇ ಕೃತ್ಯ ನೆರೆ ಬಾಂಗ್ಲಾದೇಶದಲ್ಲೂ ನಡೆದಿದೆ. ಬಾಂಗ್ಲಾದೇಶದ ಖ್ಯಾತ ಲೇಖಕ ಮತ್ತು ಜಾತ್ಯತೀತ ತತ್ವ ಪ್ರತಿಪಾದಿಸುತ್ತಿದ್ದ ಲೇಖಕರೊಬ್ಬರನ್ನು ಅಪರಿಚಿತ ದಾಳಿಕೋರರು ಸೋಮವಾರ ಸಂಜೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬಿಶಾಕಾ ಪ್ರಕಾಶನದ ಪ್ರಕಾಶಕ ಹಾಗೂ ಲೇಖಕ ಷಹಜಹಾನ್‌ ಬಚ್ಚು (60 ವರ್ಷ) ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು, ಬಾಂಗ್ಲಾದೇಶ ಕಮ್ಯುನಿಸ್ಟ್‌ ಪಾರ್ಟಿಯ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಮುನ್ಷಿಗಂಜ್‌ ಜಿಲ್ಲೆಯ ಕಾಕಲ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಫ್ತಾರ್‌ ಕೂಟಕ್ಕೂ ಮುನ್ನ, ಬಚ್ಚು ಅವರು ತಮ್ಮ ಸ್ನೇಹಿತನನ್ನು ಭೇಟಿಯಾಗಲು ಅವರ ಔಷಧ ಅಂಗಡಿಗೆ ತೆರಳಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ಐವರು ದುಷ್ಕರ್ಮಿಗಳು ಅವರನ್ನು ಹೊರಗೆಳೆದು ಗುಂಡು ಹಾರಿಸಿದ್ದಾರೆ. ದಾಳಿ ಮಾಡುವುದಕ್ಕೂ ಮುನ್ನ, ಉಗ್ರಗಾಮಿಗಳು ಔಷಧ ಅಂಗಡಿ ಎದುರು ಕಚ್ಚಾ ಬಾಂಬ್‌ ಸ್ಫೋಟಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಉಗ್ರಗಾಮಿಗಳ ಕೃತ್ಯ ಎಂದು ಹೇಳಲಾಗುತ್ತಿದೆಯಾದರೂ ಮೂಲಭೂತವಾದಿಗಳ ಕೈವಾಡದ ಕುರಿತೂ ಶಂಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಬಾಂಗ್ಲಾದೇಶ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ 2015ರಲ್ಲೂ ಇಂತಹುದೇ ಕೃತ್ಯ ನಡೆದಿತ್ತು. ಖ್ಯಾತ ಲೇಖಕ ಹಾಗೂ ಸಮಾಜವಾದಿ ಪ್ರಕಾಶಕ ಫೈಸಲ್ ಆರ್ಫಿನ್ ಡಿಪಾನ್ ರನ್ನು ಮತ್ತು 2016ರಲ್ಲಿ ಎಜಿಬಿಟಿ ಮ್ಯಾಗಜಿನ್ ನ ಸಂಪಾದಕ ರೂಪ್ ಬನ್ ರನ್ನು ಕೊಲ್ಲಲಾಗಿತ್ತು. ಇದಲ್ಲದೆ ನಾಸ್ತಿಕ ವಾದದ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ನಿಲೋಯ್ ನೀಲ್, ಬ್ಲಾಗರ್ ಅವಿಜಿತ್ ರಾಯ್ ರನ್ನು ಕೊಲ್ಲಲಾಗಿತ್ತು.

ವಾಷಿಂಗ್ಟನ್: ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿಸುವ ಭಾರತದ ಪ್ರಸ್ತಾಪಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.

ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಸಂಸ್ಥೆ ಈ ಅಪಾಚೆ ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದ್ದು, ಈ ಹಿಂದಿನ ಒಪ್ಪಂದದಂತೆ ಭಾರತಕ್ಕೆ 6 ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡಲು ಮುಂದಾಗಿತ್ತು. ಆದರೆ ಈ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಈವರೆಗೂ ಅನುಮೋದನೆ ನೀಡಿರಲಿಲ್ಲ. ಇದೀಗ ಒಪ್ಪಂದದ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡ ಕಾರಣ ಅಮೆರಿಕ ಸರ್ಕಾರ ಹೆಲಿಕಾಪ್ಚರ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಒಪ್ಪಿಗೆ ನೀಡಿದೆ. ಬೋಯಿಂಗ್ ಅಂತಾರಾಷ್ಟ್ರೀಯ ಗ್ರಾಹಕರಿಗೆ ಈ ವರೆಗೂ 2,200ಕ್ಕೂ ಅಧಿಕ ಅಪಾಚೆ ಹೆಲಿಕಾಪ್ಟರ್ ಗಳನ್ನು ಪೂರೈಸಿದೆ.

ಈ ಬಗ್ಗೆ ಅಮೆರಿಕ ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಅಮೆರಿಕದ ಆಪ್ತ ರಾಷ್ಟ್ರಗಲ್ಲಿ ಒಂದಾಗಿರುವ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಗಳನ್ನು ನೀಡಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಭಾರತ-ಅಮೆರಿಕ ನಡುವಿನ ಸೇನಾ ಕಾರ್ಯತಂತ್ರ ಒಪ್ಪಂದದ ಅನ್ವಯ ಭಾರತಕ್ಕೆ ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಸೇರಿದಂತೆ ಹಲವು ಯುದ್ಧ ಸಾಮಗ್ರಿಗಳನ್ನು ಪೊರೈಕೆ ಮಾಡಲು ಅಮೆರಿಕ ಸಿದ್ಧವಿದೆ. ಇನ್ನು ಕಳೆದ ವರ್ಷ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಭಾರತ ಪ್ರವಾಸದ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಈ ವೇಳೆ ಸಿ-17 ಗ್ಲೋಬ್ ಮಾಸ್ಟರ್ 3 ಕಾರ್ಯತಂತ್ರ ವಾಯುಶುದ್ಧೀಕರಣ ಸಾಧನಗಳು, ಎಂ-777 ಅತಿ ಲಘು ಹೊವಿಟ್ಜರ್​ಗಳು, ಸಿ130ಜೆ ಸೂಪರ್ ಹರ್ಕ್ಯುಲಿಸ್ ವಿಮಾನ ಗಳು, ಅಪಾಚೆ ದಾಳಿ ಮತ್ತು 15 ಚಿನೂಕ್ ಏರ್​ಲಿಫ್ಟ್ ಹೆಲಿಕಾಪ್ಟರ್​ಗಳು, ಪಿ-8ಐ ನೌಕಾಪಡೆ ಗಸ್ತು ಯುದ್ಧ ವಿಮಾನಗಳಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು.

2017ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿರುವ ಬೋಯಿಂಗ್ ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಸುಮಾರು 4,168 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದ್ದು, ಇಂತಹ ಆರು ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಹಲವು ವರ್ಷಗಳ ಹಿಂದೆಯೇ ಸೇನೆ ಯುದ್ಧ ಹೆಲಿಕಾಪ್ಟರ್ ಗಳ ಕೊರತೆ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿತ್ತು. ಮೂರು ವರ್ಷಗಳ ಹಿಂದೆ 39 ಹೆಲಿಕಾಪ್ಟರ್‌ ಗಳನ್ನು ಖರೀದಿಸಲು ಬಯಸಿತ್ತು. ಆದರೆ ದೇಶೀಯ ಯುದ್ಧ ಹೆಲಿಕಾಪ್ಟರ್ ಗಳ ಬಳಕೆಗೆ ಮುಂದಾಗಿದ್ದ ವಾಯುಸೇನೆ ಈ ಖರೀದಿಗೆ ವಿರೋಧ ವ್ಯಕ್ಚಪಡಿಸಿತ್ತು.